ತಿರುಪತಿ: ಶ್ರೀವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದ(Tirupati Laddu Row)ಕ್ಕೆ ಬಳಸುವ ತುಪ್ಪಕ್ಕೆ ಹಸು, ಹಂದಿ ಕೊಬ್ಬು, ಮೀನಿನೆಣ್ಣೆ ಕಲಬೆರಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ) ತುಪ್ಪ ಪೂರೈಕೆದಾರ ಸಂಸ್ಥೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಮಾನದಂಡಗಳ ಪ್ರಕಾರ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಕಲಬೆರಕೆ ತುಪ್ಪದ ಕುರಿತು ಈಗಾಗಲೇ ತಮಿಳುನಾಡಿನ ಎಆರ್ ಡೈರಿಗೆ ನೋಟಿಸ್ ನೀಡಿದ್ದು, ಹಲವು ವರ್ಷಗಳಿಂದ ತುಪ್ಪ ಪೂರೈಸುತ್ತಿರುವ ಚಿತ್ತೂರಿನ ವೈಷ್ಣವಿ ಡೈರಿ ಮತ್ತು ಕಳೆದ ಐದು ವರ್ಷಗಳಿಂದ ಟಿಟಿಡಿಗೆ ತುಪ್ಪ ಸರಬರಾಜು ಮಾಡಿದ ಇತರ ಐದು ಕಂಪನಿಗಳಿಗೂ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ವೈಷ್ಣವಿ ಡೈರಿ 1ಕೆಜಿ ತುಪ್ಪಕ್ಕೆ 2023ರಲ್ಲಿ 428.04 ರೂ., ಎಆರ್ ಡೈರಿ 432.96 ರೂ.ಗೆ ಕೋಟ್ ಮಾಡಿದ್ದರೂ, ಕಿಲೋ 320ರೂಗೆ 10 ಲಕ್ಷ ಕೆಜಿ ತುಪ್ಪ ಪೂರೈಕೆಯ ಗುತ್ತಿಗೆ ಪಡೆದುಕೊಂಡಿದೆ. ನಾಲ್ಕು ತಿಂಗಳ ಹಿಂದೆ ಇದೇ ಕಂಪನಿ ಕಿಲೋ ರೂ. 428 ನಮೂದಿಸಿತ್ತು. ಆದರೆ ಈಗ 320 ರೂ.ಗೆ ಶುದ್ಧ ತುಪ್ಪವನ್ನು ಹೇಗೆ ಪೂರೈಸುತ್ತಾರೆ ಎಂದು ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.
ತಿರುಪತಿ ಲಡ್ಡು ವಿಚಾರದಲ್ಲಿ ನೋಟಿಸ್ ಪರ್ವ ಮುಂದುವರಿದಿದೆ. ಇತ್ತೀಚೆಗಷ್ಟೇ ತಮಿಳುನಾಡಿನ ಎಆರ್ ಡೈರಿ ವಿರುದ್ಧ ಟಿಟಿಡಿ ಅಧಿಕಾರಿಗಳು ದೂರು ನೀಡಿದಾಗ ಪ್ರಕರಣ ದಾಖಲಾಗಿರುವುದು ಗೊತ್ತೇ ಇದೆ.