ನ್ಯೂಸ್

ತಿರುಪತಿ ಲಡ್ಡು ವಿವಾದ: CBI ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​

ಆಂಧ್ರಪ್ರದೇಶ: ವೈ.ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ಅವಧಿಯಲ್ಲಿ, ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂಬ ಆರೋಪದ ಕುರಿತು ತನಿಖೆಯನ್ನು ಸಿಬಿಐಗೆ(CBI )ವಹಿಸಬೇಕು ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇದೀಗ ಸುಪ್ರೀಂಕೋರ್ಟ್​ ಇಂದು (ನ.08) ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಕೆ.ವಿ.ವಿಶ್ವನಾಥ್​ ಅವರ ನೇತೃತ್ವದ ಪೀಠ, ಸಾಮಾಜಿಕ ಕಾರ್ಯಕರ್ತ ಕೆ.ಎ. ಪಾಲ್​ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ. ನಿಮ್ಮ ಮನವಿ ಪ್ರಕಾರ, ಎಲ್ಲ ದೇವಸ್ಥಾನ, ಗುರುದ್ವಾರಗಳಿಗೆ ನಾವು ಪ್ರತ್ಯೇಕ ರಾಜ್ಯವನ್ನು ರಚಿಸಬೇಕಾಗುತ್ತದೆ. ಇದು ಸಾಧ್ಯವಿಲ್ಲ. ಸಿಬಿಐ ತನಿಖೆಗೆ ಕೊಡುವಂತೆ ನಾವು ನಿರ್ದೇಶನ ಮಾಡಲು ಬರುವುದಿಲ್ಲ. ಅದು ಅಯಾ ರಾಜ್ಯಕ್ಕೆ ಸಂಬಂಧಿಸಿದ್ದು. ಹೀಗಾಗಿ, ವಜಾಗೊಳಿಸಲಾಗಿದೆ ಎಂದು ಪೀಠ ಒತ್ತಿ ಹೇಳಿದೆ.

ಕಲಬರಕೆ ತುಪ್ಪ ಸೇರಿದಂತೆ ಮತ್ತು ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು. ಅಲ್ಲದೇ, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ, ಲಡ್ಡು ಪ್ರಸಾದದ ಖರೀದಿ ಮತ್ತು ತಯಾರಿಕೆಯ ಸುತ್ತಲಿನ ಭ್ರಷ್ಟಚಾರ, ದುರುಪಯೋಗದ ಆರೋಪಗಳ ಬಗ್ಗೆ ಕೇಂದ್ರಿಯ ತನಿಖಾ ಸಂಸ್ಥೆ(CBI) ಸಮಗ್ರ ತನಿಖೆ ನಡೆಸುವಂತೆ ಪಾಲ್​ ಮನವಿ ಮಾಡಿದ್ದರು.

ತಿರುಪತಿ ಲಡ್ಡುಗಳನ್ನು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಹಿನ್ನಲೆ, ಈ ತನಿಖೆ ನಡೆಸಲು ಸುಪ್ರೀಂಕೋರ್ಟ್​ ಆ.4ರಂದು ಐದು ಸದಸ್ಯರ ನೇತೃತ್ವದ ಎಸ್​​ಐಟಿ ಸ್ವತಂತ್ರ್ಯ ಸಂಸ್ಥೆಯನ್ನು ಸ್ಥಾಪಿಸಿತ್ತು. ಅಲ್ಲದೇ, ರಾಜಕೀಯವಾಗಿ ಇದನ್ನು ಬಳಸಿಕೊಳ್ಳಬಾರದು ಎಂದು ಹೇಳಲಾಗಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಹಿರಿಯ ಅಧಿಕಾರಿಗಳು, ಸಿಬಿಐ ಮತ್ತು ಆಂಧ್ರಪ್ರದೇಶದ ಪೊಲೀಸ್​ ಇಲಾಖೆಯ ತಲಾ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿತ್ತು,(ಏಜೆನ್ಸೀಸ್).