ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ನಾಳೆ ತಿರಂಗಾ ಮಾರ್ಚ್ಗೆ ಕರೆ
ಸೆಂಟ್ರಲ್ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಅಭಿಜೀತ್ ದೀಪ್ಕೆ ಮನವಿ
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ಗೆ ಪೊಲೀಸರ ಭರವಸೆ
Abhijeet Dipke Protest: ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ತಿರಂಗಾ ಮಾರ್ಚ್ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ ನೀಡಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಹೈಕೋರ್ಟ್ಗೆ ಭರವಸೆ ನೀಡಿದ್ದಾರೆ.
ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಂಜೆ 5 ಗಂಟೆಗೆ ರಾಷ್ಟ್ರಧ್ವಜ ಹಿಡಿದು ಸೇರಲು ದೀಪ್ಕೆ ಜನರಿಗೆ ಮನವಿ ಮಾಡಿದ್ದಾರೆ. ‘ಲಹರಾ ದೋ ತಿರಂಗಾ’ ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಮೆರವಣಿಗೆ, ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ ಎಂಬ ಸಂದೇಶ ಸಾರಲಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ. ದೆಹಲಿಗೆ ಬರಲು ಸಾಧ್ಯವಾಗದವರು ತಮ್ಮ ತಮ್ಮ ನಗರಗಳಲ್ಲೂ ಇದೇ ರೀತಿಯ ಮೆರವಣಿಗೆಗಳನ್ನು ಆಯೋಜಿಸುವಂತೆ ದೀಪ್ಕೆ ಮನವಿ ಮಾಡಿದ್ದಾರೆ.
ಈ ಬೆಳವಣಿಗೆಗೆ ಮುನ್ನ, ಜಂತರ್ ಮಂತರ್ನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ದೀಪ್ಕೆ ಮತ್ತು ಅವರ ಪಕ್ಷದ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದಾಗಿ ದೆಹಲಿ ಪೊಲೀಸರು ಹೈಕೋರ್ಟ್ಗೆ ತಿಳಿಸಿದ್ದಾರೆ. (ಏಜೆನ್ಸೀಸ್)