ನ್ಯೂಸ್

ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕಿಲ್ಲ ಚಿಕಿತ್ಸೆ!

> ಕಿರುವಾರ ಎಸ್​.ಸುದರ್ಶನ್​ ಕೋಲಾರ

ಉತ್ತಮ ಆರೋಗ್ಯ ಸೇವೆ ಕಲ್ಪಿಸಿ ಬಡವರಿಗೆ ವರದಾನವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಅನಾರೋಗ್ಯ ಪೀಡಿತವಾಗಿದ್ದು, ಮೂಲಸೌಕರ್ಯಗಳಿಲ್ಲದೆ ಸೇವೆ ಕಲ್ಪಿಸಲು ತೀವ್ರ ಸಂಕಷ್ಟ ಎದುರಿಸುತ್ತಿವೆ.

ಜಿಲ್ಲೆಯಲ್ಲಿ 2 ಜಿಲ್ಲಾಸ್ಪತ್ರೆ, 5 ಸಾರ್ವಜನಿಕರ ಆಸ್ಪತ್ರೆ, 2 ಸಮುದಾಯ ಆರೋಗ್ಯ ಕೇಂದ್ರಗಳು, 72 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 302 ಉಪ ಕೇಂದ್ರಗಳು ಹಾಗೂ 24*7 ಕೆಲಸ ಮಾಡುವ 42 ಆಸ್ಪತ್ರೆಗಳಿವೆ. ಆದರೆ ಸಮರ್ಪಕ ಸೌಲಭ್ಯ ಇಲ್ಲದ ಕಾರಣ ಸಾರ್ವಜನಿಕರಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರೆಯುತ್ತಿಲ್ಲ.

ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆಯೋ ಅಥವಾ ಅಧಿಕಾರಿಗಳಲ್ಲಿ ಬದ್ಧತೆ ಕೊರತೆಯಿಂದಲೋ ಸಮಪರ್ಕ ಸೌಲಭ್ಯಗಳಿಂದ ವಂಚಿತವಾಗಿದ್ದು, ರೋಗಿಗಳಿಗೂ ಸಮರ್ಪಕ ಸೇವೆ ಸಿಗದಂತಾಗಿದೆ.

ಹೆರಿಗೆ ಮತ್ತು ಪ್ರಸೂತಿ ವಿಭಾಗ, ಮಕ್ಕಳ ಮತ್ತು ಮಹಿಳಾ ಚಿಕಿತ್ಸಾ ಟಕ, ಕಣ್ಣು, ದಂತ, ಮೂಳೆ, ಚರ್ಮ, ಪ್ರಯೋಗಾಲಯ, ಎಕ್ಸ್​ ರೇ, ರಕ್ತ ಪರೀಾ ಕೇಂದ್ರ, ತುರ್ತು ಟಕ ಸೇರಿ ವಿವಿಧ ಚಿಕಿತ್ಸಾ ಟಕ ತೆರೆಯಲಾಗಿದೆ. ಆದರೆ, ಕುಡಿಯುವ ನೀರು, ಪಾರ್ಕಿಗ್​ ವ್ಯವಸ್ಥೆ, ಖಾಸಗಿ ಆಂಬುಲೆನ್ಸ್​ಗಳ ಹಾವಳಿ, ಸಕಾಲಕ್ಕೆ ಪರೀೆಗಳ ವರದಿ ಲಭ್ಯವಾಗದಿರುವುದು, ಭದ್ರತೆ, ಔಷಧ ಕೊರತೆ, ವೈದ್ಯರು ಅಲಭ್ಯ... ಹೀಗೆ ಹಲವು ಸಮಸ್ಯೆಗಳಿಂದ ಆಸ್ಪತ್ರೆಗಳು ಸೊರಗುತ್ತಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ ಬಹುತೇಕ ರೋಗಿಗಳು ತಾಲೂಕು, ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು, ಶುಶ್ರೂಷಕಿಯರು, ಡಿ ಗ್ರೂಪ್​ ನೌಕರರು ಇಲ್ಲ. ಸಿಬ್ಬಂದಿ ಕೊರತೆ ನಡುವೆಯೂ ಲಭ್ಯವಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಸಾಧ್ಯವಾದಷ್ಟು ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ಸಿಬ್ಬಂದಿ ತಿಳಿಸುತ್ತಾರಾದರೂ ಗುಣಮಟ್ಟದ ಚಿಕಿತ್ಸೆ, ಸೇವೆಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಾದರೂ ಚಿಕಿತ್ಸೆಗಾಗಿ ಕಾಸು ಕೊಡಲೇ ಬೇಕು ಎಂಬ ಆರೋಪ ಕೇಳಿ ಬಂದಿದೆ.

* ಕಾಸು ಇಲ್ಲದಿದ್ದರೆ ಚಿಕಿತ್ಸೆ ಇಲ್ಲ!

ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವುದು, ಅಗತ್ಯವಿದ್ದರೆ ಶಸ್ತ್ರ ಚಿಕಿತ್ಸೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ಪ್ರತ್ಯೇಕ ಅನುದಾನ ಬರುತ್ತದೆ. ಆದರೆ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದ ಯಾವುದೂ ಸಿಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ರೋಗಿಗಳು ಆಸ್ಪತ್ರೆಗೆ ಬಂದರೆ ಸ್ಟ್ರೆಚರ್​ ವ್ಯವಸ್ಥೆಯೂ ಇರುವುದಿಲ್ಲ. ರೋಗಿಗಳನ್ನು ಕರೆದುಕೊಂಡು ಹೋಗಲು ಸಿಬ್ಬಂದಿಯೂ ಸಿಗುವುದಿಲ್ಲ. ಸಿಕ್ಕಿದರೂ ವಾರ್ಡಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಲು ಕನಿಷ್ಠ 50 ರೂ. ಕೊಡಲೇ ಬೇಕು. ಕಾಸು ಇಲ್ಲದಿದ್ದರೆ ಕೆಲಸವಿಲ್ಲ ಎಂಬ ವಾತಾವರಣವಿದೆ.

* ಸಮಯಪಾಲನೆ ಇಲ್ಲ

ಡಿಸೆಂಬರ್​, ಜನವರಿ ತಿಂಗಳಲ್ಲಿ ತಣ್ಣನೆಯ ವಾತಾವರಣ ಇದ್ದು, ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಜ್ವರ, ಕೆಮ್ಮು, ನೆಗಡಿ, ಮೈಕೈ, ಗಂಟಲು ನೋವಿನಂತಹ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆಗಾಗಿ ಬರುವವರು ಹೆಚ್ಚುತ್ತಿದ್ದಾರೆ. ಆದರೆ, ವೈದ್ಯರು ಬೆಳಗ್ಗೆ 11 ಗಂಟೆಗೆ ಆಗಮಿಸಿದರೆ ಮಧ್ಯಾಹ್ನ ಊಟಕ್ಕೆ 1.30ಕ್ಕೆ ಹೊರಡುತ್ತಾರೆ, ಆನಂತರ ಆಸ್ಪತ್ರೆಗೆ ಬರೋದು 3 ಗಂಟೆಗೆ. ಬೆಳಗ್ಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ರಕ್ತ ಪರೀೆಗೆ ನೀಡಿದರೆ ವರದಿ ಸಿಗೊದು ಮಧ್ಯಾಹ್ನ 3 ಗಂಟೆ ಮೇಲೆಯೇ. ಅಲ್ಲಿಯತನಕ ಕಾಯ್ದುಕಾಯ್ದು ರೋಗಿಗಳು ಸುಸ್ತಾಗಬೇಕೇ ಹೊರತು ಚಿಕಿತ್ಸೆ ಸಿಗುವುದಿಲ್ಲ. ಸಿಬ್ಬಂದಿ, ವೈದ್ಯರು ಸಮಯ ಪಾಲನೆ ಮಾಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

* ಬಿಳಿ ಚೀಟಿ ದಂಧೆ

ಯಾವುದೇ ಕಾಯಿಲೆಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಬೇಕಾಗಿರುವ ಔಷಧವೂ ಲಭ್ಯವಾಗುವುದಿಲ್ಲ. ಒಂದೆರಡು ಆಸ್ಪತ್ರೆಯಲ್ಲಿ ಸಿಕ್ಕಿದರೆ, ಬಾಕಿ ಔಷಧ ಖಾಸಗಿ ಮೆಡಿಕಲ್​ ಸ್ಟೋರ್​ನಲ್ಲಿ ತೆಗೆದುಕೊಳ್ಳುವಂತೆ ವೈದ್ಯರೇ ಶಿಾರಸು ಮಾಡುತ್ತಾರೆ. ಈ ಬಿಳಿ ಚೀಟಿ ದಂಧೆಯೂ ಅವ್ಯಾಹತವಾಗಿದ್ದರೂ ಆರೋಗ್ಯ ಇಲಾಖಾಧಿಕಾರಿಗಳು ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ದಂಧೆಗೆ ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೋಟ್​...

ಆಸ್ಪತ್ರೆ ಸ್ಥಿತಿಗತಿ ಬಗ್ಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಆಸ್ಪತ್ರೆಗಳ ಸುಧಾರಣೆಗೆ ನೂರಾರು ಕೋಟಿ ಹಣ ಬಂದಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, ಆಸ್ಪತ್ರೆಗಳಲ್ಲಿ ಯಾವುದೇ ಸೇವೆ ಸಮರ್ಪಕವಾಗಿಲ್ಲ.

- ವೈ.ಎ.ಮಂಜುನಾಥ್​