ಸಚ್ಚಾರಿತ್ರ್ಯವಂತ, ಸರಳ ಸಾಧಕನ ಸಹವಾಸ ದೊರೆಯದಿದ್ದರೂ ಪರವಾಗಿಲ್ಲ, ಸಮಯ ಸಾಧಕರ ಸಹವಾಸ ಮಾತ್ರ ಬೇಡ. ಸಮಯ ಸಾಧಕರು ಸಮಯಕ್ಕೆ ತಕ್ಕಂತೆ ಮಾತಿಗೆ ಬಣ್ಣ ಹಚ್ಚಿ ಒಳಗೊಂದು ಹೊರ ಗೊಂದು ಮಾತನಾಡುತ್ತಾ, ತಮ್ಮ ಸ್ವಾರ್ಥಕ್ಕೋಸ್ಕರ, ಕೊಟ್ಟ ವಚನ ವನ್ನೇ ತಪ್ಪಿ ನಡೆಯುತ್ತಾರೆ. ತಮ್ಮ ಕಾರ್ಯ ಸಾಧಿಸುವವರೆಗೂ, ಅಹುದೆನ್ನು ವಂತೆ ಸುತ್ತ ಸುತ್ತುತ್ತಾ ವಿಶ್ವಾಸ ಗಳಿಸಿ, ಹರಿಶ್ಚಂದ್ರನ ನಾಟಕವಾಡುತ್ತಾ ಮೊಸಳೆ ಕಣ್ಣೀರು ಸುರಿಸುವ ವಿಶ್ವಾಸದ್ರೋಹಿಗಳು ಅವರು. ಗಿಡ ಎಷ್ಟೇ ಎತ್ತರಕ್ಕೆ ಬೆಳೆದು ಶಾಖೋಪಶಾಖೆಗಳಿಂದ ಹಬ್ಬಿದರೂ, ಅದರ ಬೇರು ಇರುವುದು ನೆಲದಲ್ಲಿ ಎಂಬುದನ್ನು ಮರೆಯಬಾರದು. ಎಷ್ಟೇ ದೊಡ್ಡವನಾದರೂ ಸಹಾಯ ಮಾಡಿದವರನ್ನು ದೂರಮಾಡಿ ಅಹಂಕಾರ ದರ್ಪಗಳಿಂದ ವರ್ತಿಸಬಾರದು. ಶಾಸ್ತ್ರ ಸಂವಿಧಾನಕ್ಕೆ ಗೌರವನೀಡಬೇಕು. ‘ಅಕ್ಷರಸ್ಯಾಪಿ ಚೈತನ್ಯ ಪದಾರ್ಥಸ್ಕೋಪದೇಶಿಕಮ್ ದಾತಾರಂ ವಿಸ್ಮರನ್ ಪಾಪೀ ಕಿ ಪುನಃ ಧರ್ಮದೇಶಿನಮ್- ಎಂದು ನೀತಿ ಸಂಹಿತೆ ಯಲ್ಲಿ ಹೇಳಿದ್ದುಂಟು.
ಅಂದರೆ- ಒಂದು ಅಕ್ಷರವನ್ನು ಒಂದು ಪದವನ್ನು ಪದದರ್ಥವನ್ನು ಕಲಿಸಿದವರನ್ನೂ ಮರೆಯಬಾರದು. ಮರೆತರೆ ಅಂಥ ವನು ಮಹಾಪಾಪಿ ಎನಿಸುವನು. ಹೀಗಿರುವಾಗ ಶಾಸ್ತ್ರಸಾರವನ್ನೇ ಅಂತಃಕರಣದಿಂದ ಉಪದೇಶಿಸಿದ ಮಾರ್ಗದರ್ಶಕರನ್ನು ಮರೆಯುವ ದೆಂದರೆ ಅವನು ಮಹಾಪಾಪಿಯೇ. ಅಧಿಕಾರದ ಸಂಬಂಧಕ್ಕಾಗಿ ಪವಿತ್ರ ವ್ಯಕ್ತಿಗಳ ಸಂಬಂಧಗಳನ್ನು ಕಳೆದುಕೊಳ್ಳಬಾರದು. ಅಬ್ಬರದ ಪ್ರಚಾರಕ್ಕೆ ಮನಸೋತು ಕೀರ್ತಿ ವಾರ್ತೆಗಳ ಗಳಿಕೆಗಾಗಿ, ಸತ್ಯನಿಷ್ಠೆ ಯಥಾರ್ಥ ವನ್ನು ಬಲಿಕೊಡ ಬಾರದು. ‘ತತ್ವದರ್ಶಿನಃ’ ಎಂಬುದು ಬದುಕಿನ ಅವಿ ಭಾಜ್ಯ ಅಂಗವಾಗಲಿ, ಆ ದೃಷ್ಟಿಯಲ್ಲಿ ನಮ್ಮ ಬದುಕು ಅರ್ಥಪೂರ್ಣ ಗೊಳ್ಳಬೇಕು. ಕ್ಷಣದ ಕೋಪ-ಅಹಂಕಾರ, ಒಬ್ಬ ವ್ಯಕ್ತಿಯನ್ನು ಅವಸಾನ ದವರೆಗೂ ಒಯ್ಯುತ್ತದೆ. ಹಿಂದಿನವರು ಗಳಿಸಿಟ್ಟ ಅಧಿಕಾರ-ಗದ್ದುಗೆ ಯನ್ನು ಸ್ವಪ್ರತಿಷ್ಠೆಗೆ ಬಳಸಿಕೊಳ್ಳುವುದಲ್ಲ. ನಂಬಿದವರನ್ನು ಉದ್ಧರಿಸುವು ದಕ್ಕಾಗಿ ಎಂಬುದನ್ನು ತಿಳಿಯಬೇಕು. ಸಾಧಕ ಜೀವನ ಕಾಸಿ ಸೋಸಿ ತೆಗೆದ ಅಪ್ಪಟ ಚಿನ್ನದಂತಿರಬೇಕು. ಅಷ್ಟಮದಗಳ ಘಟ್ಟಿಯನ್ನು ಕರಗಿಸಿ,ಸ್ಪಷ್ಟ ವ್ಯಕ್ತಿತ್ವ ರೂಪುಗೊಳ್ಳುವಂತಾಗಬೇಕು. ಗದ್ದುಗೆ ಏರಿದ ಮಾತ್ರ ದಿಂದ ಯಾರೂ ಪ್ರಬುದ್ಧ ವ್ಯಕ್ತಿಗಳಾಗುವದಿಲ್ಲ. ಅದಕ್ಕೆ ಪೂರಕವಾದ ಅನುಭವ, ಸಾಧನೆ ಬೇಕು. ಎಲ್ಲ ಕ್ಷೇತ್ರಗಳ ಸಾಧಕರಿಗೂ ಇದು ಅನ್ವಯ.