ಬೆಂಗಳೂರು ರಾಜ್ಯದಲ್ಲಿ ಎನ್‌ಇಪಿ ಪೂರ್ವದಲ್ಲಿ ಮತ್ತು ನಂತರದಲ್ಲಿ ಪದವಿ ಕಾಲೇಜುಗಳಲ್ಲಿ ಐಚ್ಛಿಕ ಕನ್ನಡಕ್ಕೆ ವಾರದಲ್ಲಿ 6 ಗಂಟೆಗಳ ಬೋಧನೆ ಮಾಡುತ್ತಿದ್ದ ಅವಧಿಯನ್ನು 5 ಗಂಟೆಗೆ ಇಳಿಸಲಾಗಿದೆ. ಈ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ಗೆ ಪತ್ರ ಬರೆದಿದ್ದಾರೆ.
ರಾಜ್ಯ ಶಿಕ್ಷಣ ನೀತಿಯ ಪ್ರಕಾರ ಪದವಿ ತರಗತಿಗಳ ಸಾಮಾನ್ಯ ಬೋಧನಾ ಅವಧಿಯನ್ನು ಎನ್‌ಇಪಿಯಲ್ಲಿದ್ದ 4 ಗಂಟೆಗಳ ಬದಲಿಗೆ 3 ಗಂಟೆಗೆ ಇಳಿಸಿ ಅನ್ಯಾಯ ಮಾಡಿದ್ದನ್ನು ತಮ್ಮ ಗಮನಕ್ಕೆ ತಂದಾಗ ಸೂಕ್ತ ಕ್ರಮ ಕೈಗೊಂಡಿರುವುದಕ್ಕೆ ಧನ್ಯವಾದಗಳು. ಈಗ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯ ಶಿಕ್ಷಣ ನೀತಿಯಲ್ಲಿ ಐಚ್ಛಿಕ ಕನ್ನಡ ಬೋಧನೆಗೆ ವಾರದಲ್ಲಿ 6 ಗಂಟೆಗಳ ಬೋಧನಾ ಅವಧಿ ಇತ್ತು. ಈಗ ಕೆಲವು ವಿಶ್ವವಿದ್ಯಾಲಯಗಳು ಇದನ್ನು ಇಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದಲ್ಲೇ ಕನ್ನಡ ಬೋಧನೆಗೆ ಅನ್ಯಾಯವಾಗುವುದು ಅಕ್ಷಮ್ಯ ಎಂದು ಹೇಳುವ ಸನ್ನಿವೇಶ ಸೃಷ್ಟಿಯಾಗಿದೆ. ಹಿಂದಿನಿಂತ ಹೆಚ್ಚು ಬೋಧನಾ ಅವಧಿಯನ್ನು ನಿಗದಿ ಮಾಡುವ ಬದಲು ಕಡಿಮೆ ಮಾಡುವವರ ಮನೋಧರ್ಮ ಸರ್ಕಾರದ ಕನ್ನಡಪರ ನೀತಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ, ಇತರೆ ವಿಷಯಗಳಲ್ಲೂ ಈ ರಿತಿಯ ಬೋಧನಾ ಅವಧಿ ಕಡಿತವಾಗಿದೆ ಎಂದು ತಿಳಿದು ಬಂದಿದೆ. ಇತಿಹಾಸ ವಿಷಯಕ್ಕೆ ಒಟ್ಟು 22 ಗಂಟೆಗಳ ಬೊಧನಾ ಅವಧಿಯನ್ನು 18 ಗಂಟೆಗೆ ಇಳಿಸಲಾಗಿದೆ ಎನ್ನಲಾಗಿದೆ.
ಎನ್‌ಇಪಿಯಲ್ಲಿದ್ದ ಕೊರತೆಗಳನ್ನು ನೀಗುವ ಬದಲು ರಾಜ್ಯ ಶಿಕ್ಷಣ ನೀತಿಯ ಅನುಷ್ಠಾನದ ಮೊದಲ ಹೆಜ್ಜೆಯಲ್ಲಿಯೇ ಇಂತಹ ಗೊಂದಲಗಣ್ನು ಸೃಷ್ಟಿ ಮಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಶಿಕ್ಷಣ ಕ್ಷೇತ್ರದ ಮೌಲ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಕೂಡಲೇ ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.