ಬೆಂಗಳೂರು: ಹೊಸ ರೈಲು ಮಾರ್ಗಗಳ ನಿರ್ಮಾಣ ಕಾಮಗಾರಿಯಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ಹೆಚ್ಚುವರಿ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯಸರ್ಕಾರ ಇದೀಗ ಪ್ರತಿ ಕಾಮಗಾರಿಗೆ ಕಾಲಮಿತಿ ನಿಗದಿಗೊಳಿಸಿದೆ. ರೈಲು ಮಾರ್ಗ ಹಾಗೂ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮೂಲಸವಲತ್ತು ಅಭಿವೃದ್ಧಿ ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿದರು. ರಾಜ್ಯದಲ್ಲಿ ನಿರ್ಮಾಣ ಹಂತದ ಹೊಸ ರೈಲು ಮಾರ್ಗಗಳು ಪ್ಯಾಸೆಂಜರ್ ರೈಲುಗಳ ರೀತಿಯಲ್ಲಿ ಮಂದಗತಿಯಲ್ಲಿದ್ದರೆ, ಅಂದಾಜಿಸಿದ ವೆಚ್ಚ ಸೂಪರ್ಫಾಸ್ಟ್ ಆಗಿ ಹೆಚ್ಚುತ್ತಲೇ ಸಾಗಿದೆ. ಭೂಸ್ವಾಧೀನ, ಇನ್ನಿತರ ಸಮಸ್ಯೆಗಳಿಂದಾಗಿ ಕಳೆದ 14 ವರ್ಷಗಳಿಂದ ಒಟ್ಟು ಹೊಸ ಮಾರ್ಗಗಳ ಕಾಮಗಾರಿ ತೆವಳುತ್ತಾ ಸಾಗಿದ್ದರಿಂದ ಬೊಕ್ಕಸಕ್ಕೆ ಹೊರೆ ಹೆಚ್ಚಿದೆ. ಚಾಲ್ತಿ ಎಂಟು ಯೋಜನೆಗಳ ಪೈಕಿ ನಾಲ್ಕು ಪರಿಷ್ಕೃತ ವೆಚ್ಚದ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ರೈಲ್ವೆ ಇಲಾಖೆ ಒದಗಿಸಿದೆ. ಆ ಪ್ರಕಾರ ನಾಲ್ಕು ಯೋಜನೆಗಳ ಮೂಲ ಅಂದಾಜು ಒಟ್ಟು 4,447.64 ಕೋಟಿ ರೂ.ಗಳಾಗಿದ್ದರೆ, ಪರಿಷ್ಕೃತ ಅಂದಾಜು ವೆಚ್ಚ 8,683.97 ಕೋಟಿ ರೂ.ಗಳಿಗೇರಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಅರ್ಧ ವೆಚ್ಚ ಭರಿಸುವ ಈ ಯೋಜನೆಗಳ ವಿಳಂಬದಿಂದ ಅಂದಾಜು ಮೊತ್ತ ಏರಿಕೆಯಾಗಿದ್ದು, ಬೊಕಸಕ್ಕೆ ಹೆಚ್ಚಿನ ಭಾರ ಬೀಳಲಿದೆ. ಅಲ್ಲದೆ, ಕಾಮಗಾರಿ ಸಕಾಲಕ್ಕೆ ಪೂರ್ಣಗೊಳ್ಳದೆ ಯೋಜನೆ ಉದ್ದೇಶ ತಲೆಕೆಳಗಾಗಲಿದ್ದು, ಜನರು ಭ್ರಮನಿರಸನರಾಗಲಿದ್ದಾರೆ. ಈ ಕಾರಣಕ್ಕೆ ಪ್ರತಿಯೊಂದು ಹಂತದ ಕಾಮಗಾರಿಗೆ 15-20 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಭೂಸ್ವಾಧೀನ, ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳು ಏನೇ ಇದ್ದರೂ ಆಯಾ ಹಂತದ ಅಧಿಕಾರಿಗಳ ಗಮನಕ್ಕೆ ಬಗೆಹರಿಸಿಕೊಳ್ಳಲು ಸೂಚಿಸಿದ್ದು, ಪ್ರತಿ ತಿಂಗಳು ಯೋಜನಾ ಪ್ರಗತಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.
ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲು ನಾವಿಬ್ರೇ ಸಾಕಾಗಿತ್ತು ಎಂದು ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಪಿಸುಮಾತು ರಾಜಕೀಯ ರಂಗದಲ್ಲಿ ವೈರಲ್ ಆಗಿದೆ. ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಚಿವರು ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿ ಬಳಿಕ ಸೋಮಣ್ಣ ಹಾಗೂ ಯತ್ನಾಳ್ ಮಾತಾಡಿಕೊಂಡಿದ್ದು, ಅದೀಗ ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ‘ನಾವಿಬ್ರೇ ಉಸ್ತುವಾರಿ ವಹಿಸಿಕೊಂಡಿದ್ದರೆ 10 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಿದ್ದೆವು. ಯಾರಿಗೆ ಹೇಳೋಣವೆಂದು ನಿಡುಸುಯ್ದಿದ್ದಾರೆ. ಸಿಂದಗಿ ಉಸ್ತುವಾರಿ ನಮ್ಮಿಬ್ಬರಿಗೆ ಕೊಟ್ಟರು. ಪ್ರತಿ ಹಳ್ಳಿಯ ಓಣಿಯನ್ನೂ ಬಿಡದೆ ಸುತ್ತಾಡಿದೆವು ಎಂದು ಸೋಮಣ್ಣ ಹಾಗೂ ಯತ್ನಾಳ್ ಮೆಲುಕು ಹಾಕಿದ್ದಾರೆ.