ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಭಾರತೀಯ 20 ಯೋಧರು ಹುತಾತ್ಮರಾದ ದಿನದಿಂದಲೂ ಕಾಂಗ್ರೆಸ್ ಕೇಂದ್ರ ಸರ್ಕಾರ ವಾಗ್ದಾಳಿ ನಡೆಸುತ್ತಲೇ ಇದೆ. ಹತ್ತು ಹಲವು ಪ್ರಶ್ನೆಗಳನ್ನು ಹಾಕುತ್ತಿದೆ.
ಪೂರ್ವ ಲಡಾಖ್ನ ವಾಸ್ತವ ಸ್ಥಿತಿ ತಿಳಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿ ಚೀನಾವನ್ನು ಸಾರ್ವಜನಿಕವಾಗಿ ಟೀಕಿಸಿ ಎಂಬಿತ್ಯಾದಿ ಒತ್ತಡಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೇರುತ್ತಿದೆ.
ಇಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೇವಾಲಾ ಕೂಡ ಭಾರತ-ಚೀನಾ ಗಡಿ ಸಂಘರ್ಷದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ಚೀನಾ ಇಷ್ಟೆಲ್ಲ ಕುತಂತ್ರ ಮಾಡಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದರ ಹೆಸರು ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಇತ್ತು. 33 ನಿಮಿಷ ಮಾತನಾಡಿದ್ದಾರೆ. ಆದರೆ ಒಮ್ಮೆಯೂ ಚೀನಾದ ಹೆಸರನ್ನು ಹೇಳಲಿಲ್ಲ ಯಾಕೆ ನಮ್ಮ ಪ್ರಧಾನಿಗೆ ಚೀನಾ ಎಂದರೆ ಭಯ?
ಕೇಂದ್ರ ಸರ್ಕಾರ ಈಗ ಕಾರ್ಯತಂತ್ರ ಬದಲಿಸಿಕೊಳ್ಳುವ ಸಮಯ ಎದುರಾಗಿದೆ. ಭಯವನ್ನು ತ್ಯಜಿಸಬೇಕು. ಧೈರ್ಯದಿಂದ, ಯುದ್ಧತಂತ್ರದ ಮೂಲಕ ಚೀನಾದ ಅತಿಕ್ರಮಣಕ್ಕೆ ಉತ್ತರ ನೀಡಬೇಕು ಎಂದು ಸರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ನಲ್ಲಿ ಭಾರತ-ಚೀನಾ ಸಂಘರ್ಷದ ಬಗ್ಗೆ ಮಾತನಾಡಿದ್ದರು. ಭಾರತದ ಸಾಮರ್ಥ್ಯ ಮತ್ತು ಶಾಂತಿಯೆಡೆಗಿನ ಅದರ ಬದ್ಧತೆಯನ್ನು ಇಡೀ ದೇಶವೇ ನೋಡುತ್ತದೆ. ನಾವು ಗಡಿಯಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದರು. (ಏಜೆನ್ಸೀಸ್)