ಶಿವಮೊಗ್ಗ: ನಗರಕ್ಕೆ ಆಗಮಿಸಿದ ಟಿ-55 ಯುದ್ಧ ಟ್ಯಾಂಕರ್ ಅನ್ನು ವಿದ್ಯಾನಗರದ ವಿದ್ಯುತ್ ನಿಗಮದ ಕ್ವಾರ್ಟರ್ಸ್‌ನಲ್ಲಿ ಇರಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಟ್ಯಾಂಕರ್ ಸುತ್ತಲು ಕಬ್ಬಿಣದ ಬೇಲಿ ಹಾಕಲಾಗಿದೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಯುದ್ಧ ಟ್ಯಾಂಕರ್ ಸ್ಮಾರಕ ನಿರ್ಮಾಣಕ್ಕೆ 1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ ಟಿ-55 ಮಾದರಿಯ ಟ್ಯಾಂಕರ್ ತರಲಾಗಿದೆ. ವಿಚಾರ ತಿಳಿದು ಹೆಚ್ಚಿನ ಸಂಖ್ಯೆ ಜನರು ಟ್ಯಾಂಕರ್ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಹಾಗಾಗಿ ಟ್ಯಾಂಕರ್‌ನ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಬ್ಬಿಣದ ಬೇಲಿ ನಿರ್ಮಿಸಲಾಗಿದೆ.
ಟ್ಯಾಂಕರ್ ನಿಲ್ಲಿಸಲು ಸಿಮೆಂಟ್ ಹಾಕಲಾಗಿದೆ. ಅದರ ಸುತ್ತಲು ಕಬ್ಬಿಣ ಚೈನ್ ಲಿಂಕ್ ಫೆನ್ಸ್ ಅಳವಡಿಸಲಾಗಿದೆ. ಬಿಸಿಲು, ಮಳೆಗೆ ಟ್ಯಾಂಕರ್ ತುಕ್ಕು ಹಿಡಿಯುವುದನ್ನು ತಪ್ಪಿಸಲು ಶೀಟ್ ಹಾಕಲಾಗಿದೆ. ಎಂಆರ್‌ಎಸ್ ಸರ್ಕಲ್‌ನಿಂದ ವಿದ್ಯುತ್ ಪ್ರಸರಣ ನಿಗಮದ ಕ್ವಾಟರ್ಸ್ ಒಳಗೆ ಟ್ಯಾಂಕರ್ ತರಲು ಕೌಂಪೌಡ್ ತೆರವು ಮಾಡಲಾಗಿತ್ತು. ಈಗ ಕಾಂಪೌಂಡ್ ಅನ್ನು ಪುನರ್ ನಿರ್ಮಿಸಲಾಗಿದೆ.
ಯುದ್ಧ ಟ್ಯಾಂಕರ್ ಅನ್ನು ಸಮೀಪದಿಂದ ಕಾಣುವ ಕುತೂಹಲ, ಅದರ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಆಸೆಯಿಂದ ಜನರು ಬರುತ್ತಿದ್ದಾರೆ. ಕ್ವಾರ್ಟರ್ಸ್ ಒಳಗೆ ಬಂದು ಟ್ಯಾಂಕರ್ ಸಮೀಪ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಟ್ಯಾಂಕರ್ ಅನ್ನು ಹತ್ತಿರದಿಂದ ಕಂಡು ಖುಷಿ ಪಡುತ್ತಿದ್ದಾರೆ. ಎಂಆರ್‌ಎಸ್ ಸರ್ಕಲ್‌ನಲ್ಲಿ ಬಸ್ಸಿಗಾಗಿ ಕಾಯುವವರು ಕೂಡ ಟ್ಯಾಂಕರ್ ಅನ್ನು ಸಮೀಪದಿಂದ ಕಾಣಬಹುದಾಗಿದೆ. ವಿದ್ಯಾರ್ಥಿಗಳು ಕೌಂಪೌಂಡ್ ಬಳಿ ನಿಂತು ಟ್ಯಾಂಕರ್ ವೀಕ್ಷಿಸುತ್ತಿದ್ದಾರೆ.