ನ್ಯೂಸ್

ಜಯಲಕ್ಷ್ಮೀಪುರ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ

ಸರಗೂರು: ಬಂಡಿಪುರ ಅಭಯಾರಣ್ಯ ವ್ಯಾಪ್ತಿಗೆ ಸೇರಿದ ಹೆಡಿಯಾಲ ವಲಯದ ಕಾಡಂಚಿನ ಜಯಲಕ್ಷ್ಮೀಪುರ ಗ್ರಾಮದಲ್ಲಿ ಜಮೀನಿನಲ್ಲಿ ಬುಧವಾರ ಹುಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಭಯವನ್ನುಂಟು ಮಾಡಿದೆ.


ಇತ್ತೀಚಿನ ದಿನಗಳಲ್ಲಿ ಜಮೀನಿಗೆ ಮೇಯಲು ಹೋದ ಜಾನುವಾರುಗಳು ಹುಲಿ ಇರುವಿಕೆಯಿಂದ ಗಾಬರಿಗೊಳ್ಳುತ್ತಿವೆ. ಇದರಿಂದ ಗ್ರಾಮಸ್ಥರಲ್ಲಿ ಭಯ ಹೆಚ್ಚಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆಮಾಡಿ ವಿಷಯ ತಿಳಿಸಲು ಹೋದರೆ ಅವರು ನಿರ್ಲಕ್ಷೃ ಧೋರಣೆ ತಾಳುತ್ತಿದ್ದಾರೆ ಎಂದು ಗ್ರಾಮದ ಗ್ರಾಪಂ ಸದಸ್ಯ ವೆಂಕಟರಾಮು ದೂರಿದರು.


ಹುಲಿ ಇರುವುದರಿಂದ ಈ ಭಾಗದ ರೈತರು ಹಗಲು ವೇಳೆಯೇ ಜಮೀನಿಗೆ ತೆರಳಲು ಹೆದರುವಂತಾಗಿದೆ. ರೈತರು ರಾತ್ರಿ ವೇಳೆಯಲ್ಲಿ ಜಮೀನಿನ ಕಾವಲು ಕಾಯುವುದನ್ನು ನಿಲ್ಲಿಸಿದ್ದಾರೆ.


ಎರಡು ಮೂರು ವರ್ಷಗಳಿಂದ ಹೆಡಿಯಾಲ ಮತ್ತು ಮೊಳೆಯೂರು ವಲಯಗಳ ಗ್ರಾಮಗಳು ಚಿಕ್ಕಬರಗಿ, ಚನ್ನಗುಂಡಿ, ಹಾದನೂರು, ನಡಾಡಿ, ಕಾಡುಬೆಗೂರು, ಹೀರಹಳ್ಳಿ, ಕೂಡಗಿ, ಕುರ್ಣೇಗಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಹುಲಿ ಜಾನುವಾರುಗಳ ಮೇಲೆರಗಿ ಕೊಂದಿವೆ.


ಮತ್ತೆ ಹುಲಿ ಕಾಡಂಚಿನ ಭಾಗದಲ್ಲಿರುವ ಜಮೀನಿನಲ್ಲಿ ಸುತ್ತಾಡುತ್ತಿದೆ. ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಗೊತ್ತಿಲ್ಲದ ರೀತಿಯಲ್ಲಿದ್ದಾರೆ. ಇನ್ನಾದರೂ ಹುಲಿ ಸೆರೆ ಹಿಡಿದು ಜನ, ಜಾನುವಾರುಗಳನ್ನು ರಕ್ಷಿಸಬೇಕಿದೆ.