ನ್ಯೂಸ್

ಹೆದ್ದಾರಿಯ ಫ್ಲೈಓವರ್​ ಮಧ್ಯೆಯೇ ಮಲಗಿ ಹುಲಿರಾಯ ಘರ್ಜನೆ: ಮೈನವಿರೇಳಿಸೋ ವಿಡಿಯೋ ಇದು!

ಭೋಪಾಲ್​: ವಾಹನ ನಿಬಿಡ ಹೆದ್ದಾರಿಯ ಫ್ಲೈಓವರ್​ ಮಧ್ಯೆಯೇ ಕುಳಿತು ಹುಲಿಯೊಂದು ಘರ್ಜಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೈನವಿರೇಳಿಸುವಂತಿದೆ.

ದಾರಿಹೋಕರೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಂದಹಾಗೆ ಈ ಘಟನೆ ಸಿಯೋನಿ ಜಿಲ್ಲೆಯಿಂದ 25 ಕಿ.ಮೀ ದೂರವಿರುವ ಪೆಂಚ್​ ರಾಷ್ಟ್ರೀಯ ಉದ್ಯಾನವನ ಬಫರ್ ಝೋನ್​ನಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹುಲಿ ಕಾಣಿಸಿಕೊಂಡು ರಸ್ತೆ ನಡುವೆಯೇ ಕೆಲವೊತ್ತು ಮಲಗಿದ್ದಾಗ ಆ ಸ್ಥಳದ ಸಮೀದಲ್ಲೇ ಕೆಲ ಕಾಮಗಾರಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ನಿಬಿಡಿ ಫ್ಲೈಓವರ್​ನಲ್ಲೇ ಹುಲಿ ಕುಳಿತಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್​ ಜಾಮ್​ ಸಹ ಉಂಟಾಯಿತು.

ವೈರಲ್​ ಆಗಿರುವ ವಿಡಿಯೋದಲ್ಲಿ ರಸ್ತೆ ಮಧ್ಯೆ ಕಾಲುಚಾಚಿ ಮಲಗಿರುವ ಹುಲಿ ಘರ್ಜಿಸಿದೆ. ವಿಶೇಷವೆಂದರೆ ಹುಲಿ ಯಾರೊಬ್ಬರ ಮೇಲೂ ದಾಳಿ ನಡೆಸಿಲ್ಲ. ಹುಲಿ ನೋಡಿದ ತಕ್ಷಣ ದಾರಿಹೋಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರೂ, ಕೆಲವೊತ್ತು ಅಲ್ಲೇ ಇದ್ದ ಹುಲಿ ನಂತರ ಮೇಲಕ್ಕೆ ಎದ್ದು ರಾಜ ಗಾಂಭೀರ್ಯದಿಂದ ಕಾಡಿನತ್ತ ಹೆಜ್ಜೆ ಹಾಕಿತು.

ಅಂದಹಾಗೆ ಪೆಂಚ್​ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕ ಹುಲಿಗಳಿವೆ. ಈಗ, ಹುಲಿಗಳು ಮತ್ತು ಇತರ ವನ್ಯಜೀವಿಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ಸಿಯೋನಿ ಮತ್ತು ನಾಗ್ಪುರದ ನಡುವಿನ ಹೆದ್ದಾರಿಯಲ್ಲಿ ಎತ್ತರದ ಪ್ರದೇಶಗಳನ್ನು ನಿರ್ಮಿಸಲಾಗುತ್ತಿದೆ. (ಏಜೆನ್ಸೀಸ್​)