ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿದೆ. 
ನ್ಯೂಸ್

ಹೆಗ್ಗನೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು

ಆತಂಕದಿಂದಾಗಿ ಜಮೀನಿಗೂ ತೆರಳದ ರೈತರು
ವಿಜಯವಾಣಿ ಸುದ್ದಿಜಾಲ ಸರಗೂರು
ಹೆಗ್ಗನೂರು ಗ್ರಾಮದ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಭಾನುವಾರ ಜಾನುವಾರು ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಹೆಗ್ಗನೂರು, ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗನೂರು, ತೆಲಗುಮಸಹಳ್ಳಿಯಲ್ಲಿ ಮೂರು-ನಾಲ್ಕು ತಿಂಗಳಿಂದ ಹುಲಿ ದನಕರುಗಳ ಮೇಲೆ ದಾಳಿ ಮಾಡುತ್ತಿದೆ. ಹುಲಿ ಚಲನವಲನದ ಮಾಹಿತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡಿದರೂ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುತ್ತಮುತ್ತಲಿನ ಗ್ರಾಮದ ಜಮೀನುಗಳಲ್ಲೇ ಹುಲಿ ಬೀಡುಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮಸ್ಥರು ಹುಲಿಯ ಹೆಜ್ಜೆ ಗುರುತು ಕಂಡು ಆತಂಕ ವ್ಯಕ್ತಪಡಿಸಿ, ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗೆ ತೆಲುಗು ಮಸಹಳ್ಳಿ ಗ್ರಾಮದ ಜಮೀನಲ್ಲಿ ದನಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ರಾತ್ರಿ ವೇಳೆಯಲ್ಲಿ ಹುಲಿ ಕಾಣಿಸಿಕೊಂಡಿದ್ದನ್ನು ವಾಹನ ಸವಾರೊಬ್ಬರು ವಿಡಿಯೋ ಮಾಡಿದ್ದರು. ಹುಲಿ ಕಾಣಿಸಿಕೊಂಡಾಗಿನಿಂದ ರೈತರು ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು ಮತ್ತು ಜಾನುವಾರುಗಳನ್ನು ಮೇಯಲು ಬಿಡಲು ಹೆದರುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಹುಲಿ, ಬೆಳಗ್ಗೆ ಇಲಾಖೆಯ ಸಿಬ್ಬಂದಿ ಸೆರೆಗಾಗಿ ಕಾರ್ಯಾಚರಣೆ ಮಾಡಿದರೆ ಪತ್ತೆಯಾಗುತ್ತಿಲ್ಲ. ಬೋನಿಗೂ ಬೀಳುತ್ತಿಲ್ಲ. ಇದು ರೈತರಲ್ಲಿ ಇನ್ನಷ್ಟು ಭಯ ಮೂಡಿಸಿದೆ.
ಸರಗೂರು ಪಟ್ಟಣ, ನರಸೀಪುರ, ದೇವಲಾಪುರ, ಹೆಗ್ಗುನೂರು, ಸಾಗರೆ, ಅಗತ್ತೂರು ಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ. ತೆಲುಗು ಮಸಹಳ್ಳಿ, ಹೆಗ್ಗನೂರು ಗ್ರಾಮದಲ್ಲಿ ಇತ್ತೀಚೆಗೆ ಎರಡು ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಬೋನು ಇಟ್ಟು ಕ್ಯಾಮರಾ ಅಳವಡಿಸಿ ಕಾರ್ಯಾಚರಣೆ ನಡೆಸಲಾಗಿದ್ದರೂ ಪತ್ತೆಯಾಗಿಲ್ಲ.
ಹುಲಿ ಆಗಾಗ್ಗೆ ಕಾಣಿಸಿಕೊಂಡು ಭಯ ಉಂಟು ಮಾಡಿದೆ. ಅರಣ್ಯ ಇಲಾಖೆಯು ಶೀಘ್ರ ಸೆರೆ ಹಿಡಿಯಬೇಕು. ಇಲಾಖೆಯವರು ಒಂದೆರಡು ದಿನ ಕಾರ್ಯಾಚರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಮನಸ್ಸಿನಲ್ಲಿ ಇನ್ನೂ ಭಯ ಆವರಿಸಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.