ನ್ಯೂಸ್

ಮನುಷ್ಯನನ್ನು ಹಿಡಿದು ಕೊಂದಿದ್ದ ಹೆಣ್ಣು ಹುಲಿಗೆ ಅನಾರೋಗ್ಯ; ಹೊಳೆಯಲ್ಲೇ ಪ್ರಾಣ ಬಿಟ್ಟಿತು

ಪಥನಂತಿಟ್ಟ: ಸ್ವಲ್ಪ ದಿನಗಳ ಹಿಂದೆ ಮಾನವನನ್ನು ಹಿಡಿದು, ಕೊಂದ ಹೆಣ್ಣು ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಹುಲಿಯ ಮೃತದೇಹ ಕೇರಳದ ಪಥನಂತಿಟ್ಟ ಜಿಲ್ಲೆಯ ಮಣಿಯಾರ್​ನಲ್ಲಿನ ಒಂದು ಕೃಷಿಭೂಮಿ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.

ಕಾಡಿಗೆ ಹೊಂದಿಕೊಂಡಿರುವ ಈ ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನಿಗೆ ಹೊಳೆಯಲ್ಲಿ ಹುಲಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಚಿತ್ತಾರ್​ನಲ್ಲಿರುವ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ, ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ಈ ಹೆಣ್ಣು ಹುಲಿಯ ಬಲಗಾಲಿನ ಮೇಲೆ ತೀವ್ರವಾದ ಗಾಯವಾಗಿದೆ. ಅಲ್ಲದೆ, ತುಂಬ ಸಣಕಲಾಗಿತ್ತು. ಈ ಪ್ರಾಣಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿತ್ತು, ಉಸಿರಾಟದ ಸಮಸ್ಯೆಯುಂಟಾಗಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೂ ಕೆಲವು ಅನುಮಾನಗಳು ಕಾಡುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹುಲಿಯ ಮೃತದೇಹದ ಮಾದರಿಗಳನ್ನು ತಪಾಸಣೆಗಾಗಿ ಲ್ಯಾಬ್​ಗೆ ಕಳಿಸಲಾಗಿದೆ.

ಮೇ ತಿಂಗಳಲ್ಲಿ ಇಡುಕ್ಕಿ ನಿವಾಸಿಯಾದ ರಬ್ಬರ್​ ಟ್ಯಾಪಿಂಗ್​ ಗುತ್ತಿಗೆದಾರನೋರ್ವ ಥನ್ನಿಥೋಡುನಲ್ಲಿರುವ ಮೇದಪ್ಪರಾ ಪ್ಲಾಂಟೇಶನ್​​ನಲ್ಲಿ ಹುಲಿಗೆ ಬಲಿಯಾಗಿದ್ದ. ಅಂದು ಆತನನ್ನು ಹಿಡಿದು ಕೊಂದ ಹುಲಿ ಇದೇ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ನೀರು ಬೀಡಲು ಕಾವೇರಿ ಪ್ರಾಧಿಕಾರ ಆದೇಶ: ಮೇಕೆದಾಟು ಯೋಜನೆ ಪ್ರಸ್ತಾವನೆಗೂ ತಡೆ

ಕೇರಳದಲ್ಲಿ ಇತ್ತೀಚೆಗೆ ಗರ್ಭಿಣಿ ಆನೆಯೊಂದು ಯಾರೋ ಕೊಟ್ಟಿದ್ದ ಸ್ಫೋಟಕ ತುಂಬಿದ ಪೈನಾಪಲ್​ ತಿಂದು ಮೃತಪಟ್ಟಿತ್ತು. ಈ ಕೃತ್ಯಕ್ಕೆ ದೇಶದೆಲ್ಲೆಡೆಯಿಂದ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್​)