ನ್ಯೂಸ್

ಹುಲಿ ಉಗುರು ಪ್ರಕರಣ; ನಟ ಜಗ್ಗೇಶ್​ ವಿರುದ್ಧ ದೂರು ದಾಖಲು

ಬೆಂಗಳೂರು:  ಹುಲಿ ಉಗುರಿನ ಲಾಕೆಟ್​ ಧರಿಸಿದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇದಾದ ಬಳಿಕ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಇದೀಗ ನಟ ಜಗ್ಗೇಶ್‌ಗೂ ಸಂಕಷ್ಟ ಎದುರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ದೂರು ಕೂಡಾ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ ಅವರು ಹುಲಿ ಉಗುರು ಲಾಕೆಟ್​​​​ ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್​ ವಿರುದ್ಧ ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.

ಈ ಹಿಂದೆ ತಮ್ಮ ಬಳಿ ಹುಲಿ ಉಗುರು ಇರುವ ಬಗ್ಗೆ ಜಗ್ಗೇಶ್ ಬಹಿರಂಗವಾಗಿಯೇ ಹೇಳಿಕೆ‌ ನೀಡಿದ್ದರು. ಹುಲಿ ಉಗುರು ಧರಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು” ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಉಗುರು ಧರಿಸಿದ್ದಕ್ಕೆ ಬಿಗ್​ ಬಾಸ್​ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ಹಲವರು ಹುಲಿ ಉಗುರಿನ ಲಾಕೆಟ್​ ಧರಿಸಿಕೊಂಡಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವರ್ತೂರ್ ಸಂತೋಷ್​ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.