ನ್ಯೂಸ್

ಹುಲಿಯೂ ಕೆಮ್ಮೋಕೆ ಶುರುಮಾಡ್ತು - ಪ್ರಾಣಿಗಳಿಗೂ ಸೋಂಕು ಹರಡಿದ್ದಾರು ಎಂದು ತಿಳಿದ್ರೆ ನಿಮಗೆ ಆಗತ್ತೆ ಗ್ಯಾರೆಂಟಿ ಶಾಕ್​!

ನ್ಯೂಯಾರ್ಕ್​: ಅಮೆರಿಕದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದ್ದು, ನ್ಯೂಯಾರ್ಕ್​ನ ಮೃಗಾಲಯದಲ್ಲಿರುವ ನಾಲ್ಕು ವರ್ಷದ ಒಂದು ಹೆಣ್ಣು ಹುಲಿ ಕೆಮ್ಮುತ್ತಿರುವುದು ನೋಡಿ ಪರೀಕ್ಷೆಗೊಳಪಡಿಸಿದಾಗ ಅದಕ್ಕೂ COVID19 ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರ ಜತೆಗೆ ಇದ್ದ ಇತರೆ ಹುಲಿಗಳಿಗೂ ಸೋಂಕು ತಗುಲಿದೆ!

ನ್ಯೂಯಾರ್ಕ್​ನ ಬ್ರೋನ್ಕ್ಸ್​ ಝೂನಲ್ಲಿ ಇರುವ ಮಲಯನ್ ಹುಲಿ ಇದಾಗಿದ್ದು, ಇದಕ್ಕೆ ಮೃಗಾಲಯದ ಉದ್ಯೋಗಿ ಒಬ್ಬರಿಂದ ಸೋಂಕು ಹರಡಿದೆ. ಮಾರ್ಚ್ 16ರಿಂದ ಈ ಮೃಗಾಲಯದ ಬಾಗಿಲು ಸಾರ್ವಜನಿಕರಿಗೆ ಮುಚ್ಚಿದೆ. ಮಲಯನ್ ಹುಲಿಯ ಹೆಸರು ನಾದಿಯಾ. ಅದು ಮತ್ತು ಅದರ ಜತೆ ಇರುವ ಇತರೆ ಐದು ಹುಲಿ ಮತ್ತು ಸಿಂಹಗಳಿಗೆ ಈಗ ಉಸಿರಾಟದ ತೊಂದರೆ ಕಾಣಿಸಿದೆ.

ನಾದಿಯಾ ಜತೆಗೆ ಆಕೆಯ ಸಹೋದರಿ ಆಜುಲ್​, ಎರಡು ಅಮೂರ್ ಹುಲಿಗಳು ಮತ್ತು ಮೂರು ಆಫ್ರಿಕನ್ ಸಿಂಹಗಳಲ್ಲಿ ಒಣಕೆಮ್ಮು ಕಾಣಿಸಿವೆ. ಆದಾಗ್ಯೂ ಇವೆಲ್ಲವೂ ಚೇತರಿಸುವ ನಿರೀಕ್ಷೆ ಇದೆ. ಬೇರೆ ಯಾವುದೇ ಪ್ರಾಣಿಗಳಲ್ಲೂ ಈ ರೀತಿ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಮೃಗಾಲಯದ ಅಧಿಕೃತರು ಹೇಳಿದ್ದಾರೆ.

ಈ ಪ್ರಾಣಿಗಳಲ್ಲಿ ಹಸಿವು ಕಡಿಮೆ ಆಗಿದ್ದು, ಉಳಿದಂತೆ ಎಲ್ಲ ರೀತಿಯ ಚಿಕಿತ್ಸೆಗಳು ಮುಂದುವರಿದಿವೆ. ಎಲ್ಲದಕ್ಕೂ ಅವುಗಳು ಸ್ಪಂದಿಸುತ್ತಿವೆ. ಆದಾಗ್ಯೂ, ಈ ಸೋಂಕು ಪ್ರಾಣಿಗಳಲ್ಲಿ ಹೇಗೆ ಹರಡಿತು ಎಂಬುದು ವೇದ್ಯವಾಗಿಲ್ಲ. ಪ್ರತಿಯೊಂದು ಅಂಶವನ್ನೂ ಪರಿಶೀಲಿಸುತ್ತಿದ್ದು, ಸೋಂಕು ಹರಡುವಿಕೆಗೆ ಕಾರಣ ಪತ್ತೆ ಹಚ್ಚಲಾಗುವುದು ಎಂದು ಮೃಗಾಲಯದ ಅಧಿಕೃತರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)