ನವದೆಹಲಿ: ಲಾಕ್ಡೌನ್ ಅವಧಿ ಪೂರ್ಣಗೊಂಡ ನಂತರ ರೈಲು ಹಾಗೂ ವಿಮಾನಗಳ ಸಂಚಾರ ಮತ್ತೆ ಆರಂಭವಾಗಲಿದೆ.
ಸದ್ಯ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಈ ಅವಧಿಯನ್ನು ಮುಂದುವರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಭರವಸೆ ಕಾರಣದಿಂದಾಗಿ ವಿಮಾನ ಯಾನ ಸಂಸ್ಥೆಗಳು ಬುಕಿಂಗ್ ಆರಂಭಿಸಿವೆ. ಈ ಬಗ್ಗೆ ಪ್ರಯಾಣಿಕರು ಸಂಸ್ಥೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕೆಲ ವಿಮಾನ ಯಾನ ಸಂಸ್ಥೆಗಳು ಬುಕಿಂಗ್ ಶುರುವಾಗಿದೆ ಎಂದು ವೆಬ್ಸೈಟ್ನಲ್ಲಿ ಪ್ರಕಟಿಸಿವೆ. ಸ್ಪೈಸ್ ಜೆಟ್, ಇಂಡಿಗೋ, ಗೋ ಏರ್ ಮೊದಲಾದ ಸಂಸ್ಥೆಗಳು ಏಪ್ರಿಲ್ 15 ರ ಬಳಿಕ ದೇಶೀಯ ಯಾನಕ್ಕೆ ಬುಕಿಂಗ್ ಲಭ್ಯವಿದೆ ಎಂದು ಘೋಷಿಸಿವೆ. ಆದರೆ, ಈ ಕುರಿತು ಅಧಿಕೃತ ಪ್ರಕಟನೆಯನ್ನು ಈವರೆಗೂ ಹೊರಡಿಸಿಲ್ಲ. ಹೀಗಾಗಿ ಪ್ರಯಾಣಿಕರಲ್ಲಿ ಬುಕಿಂಗ್ ಮಾಡಬೇಕೋ ಬೇಡವೋ ಎಂಬ ಗೊಂದಲ ಮುಂದುವರಿಯಲು ಕಾರಣವಾಗಿದೆ.
ರೈಲ್ವೆ ಮುಂಗಡ ಕಾದಿರಿಸುವಿಕೆ ನಿಲ್ಲಿಸಿಲ್ಲ
ಟಿಕೆಟ್ ಮುಂಗಡ ಕಾದಿರಿಸುವಿಕೆಯನ್ನು ರದ್ದು ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ. 120 ದಿನ ಮುಂಚಿತವಾಗಿ ಟಿಕೆಟ್ ಕಾದಿರಿಸುವ ವ್ಯವಸ್ಥೆ ಹಿಂದಿನಂತೆ ಈಗಲೂ ಮುಂದುವರಿದಿದೆ. ಲಾಕ್ಡೌನ್ ಅವಧಿ ಹೊರತುಪಡಿಸಿ ಉಳಿದ ಅವಧೀಗೆ ಈಗಲೂ ಕಾದಿರಿಸಬಹುದು ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಏಪ್ರಿಲ್ 15 ಹಾಗೂ ಅದರ ನಂತರದ ಅವಧಿಗೆ ಮೊದಲಿನಿಂದಲೇ ಮುಂಗಡ ಟಿಕೆಟ್ ಕಾದಿರಿಸಲಾಗಿದೆ. ಆದ್ದರಿಂದ ಯಾರಾದರೂ ಈ ಟಿಕೆಟ್ ರದ್ದು ಪಡಿಸುವುದಾದಲ್ಲಿ ಅವರಿಗೆ ಜೂನ್ 21ರವರೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.