ಹವಾಮಾನ ಇಲಾಖೆಯ ತಾಜಾ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಇಂದು ಸಂಜೆ ಮತ್ತು ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಮಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಕಂಡುಬರುತ್ತಿರುವ ಮಳೆಯ ಅಬ್ಬರ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ತಾಜಾ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಇಂದು ಸಂಜೆ ಮತ್ತು ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
*ಕರಾವಳಿಯಲ್ಲಿ ಮಳೆ ಇಳಿಕೆ
ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಸುಳಿಗಾಳಿಯ ತಿರುವಿಕೆಯು ಶಿಥಿಲಗೊಳ್ಳುತ್ತಿದೆ. ಇದರ ಪರಿಣಾಮವಾಗಿ, ಮೇ 16ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಕಳೆದ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸ್ವಲ್ಪ ಮಟ್ಟಿನ ಬಿಡುವು ಸಿಗುವ ಸಾಧ್ಯತೆಯಿದೆ.
*ಅಂಡಮಾನ್‌ಗೆ ಮುಂಗಾರು ಆಗಮನ
2026ನೇ ಸಾಲಿನ ಮುಂಗಾರು ಮಾರುತಗಳ ಚಲನೆಯಲ್ಲಿ ಪ್ರಗತಿ ಕಂಡುಬಂದಿದೆ. ಮೇ 16 ಅಥವಾ 17ರ ಸುಮಾರಿಗೆ ನೈರುತ್ಯ ಮುಂಗಾರು ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ. ಇದು ನಿಗದಿತ ಸಮಯಕ್ಕಿಂತ ತುಸು ಮುಂಚಿತವಾಗಿಯೇ ಮುಂಗಾರು ಆರಂಭವಾಗುವ ಸೂಚನೆಯನ್ನು ನೀಡಿದೆ. ಅಂಡಮಾನ್ ತಲುಪಿದ ಬಳಿಕ ಮುಂಗಾರು ಮಾರುತಗಳು ಕೇರಳದತ್ತ ಮುಖ ಮಾಡಲಿವೆ. ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದರೆ, ಮೇ 20ರಿಂದ 25ರ ನಡುವೆ ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಾರುತಗಳು ಅಧಿಕೃತವಾಗಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.