ಕರೊನಾ ಸಮಸ್ಯೆಯಿಂದ ಸಾಯುವವರಿಗಿಂತ ಅದರ ಹೆದರಿಕೆಯಿಂದ ಸಾಯುವವರ ಸಂಖ್ಯೆಯೇ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಕರೊನಾಕ್ಕಿಂತ ಉಳಿದ ರೋಗಗಳಿಂದ ಸತ್ತ ಜನರ ಸಂಖ್ಯೆ ಹತ್ತು ಪಟ್ಟು ಹೆಚ್ಚು. ನಾವು ಬೀದಿ ಬದಿಯ ಆಹಾರ ಅಥವಾ ಪ್ಯಾಕ್ಡ್ ಫುಡ್ ತಿನ್ನುವಾಗ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತೇವೆ ಎಂಬ ಭಯ ಆಗುವುದಿಲ್ಲ. ಆದರೆ ಅದರ ಶೇ. ಹತ್ತರಷ್ಟು ಕೂಡ ತೊಂದರೆ ಕೊಡದ ಕರೊನಾಕ್ಕೆ ಹೆದರಿ ಕಂಗಾಲಾಗಿದ್ದೇವೆ. ಅದಕ್ಕೆ ಕಾರಣವೆಂದರೆ ಇದಕ್ಕೆ ಔಷಧವಿಲ್ಲ ಎಂಬುದು. ಔಷಧವಿರುವ ಕಾಯಿಲೆ ಬಂದವರೆಲ್ಲ ಔಷಧದಿಂದ ಪಾರಾಗಲು ಸಾಧ್ಯವಾಗಿಲ್ಲ ಎಂಬುದು ನಮಗೆ ಮರೆತೇಹೋಗಿದೆ.
ಯಾರ ರೋಗನಿರೋಧಕ ಶಕ್ತಿ ದೃಢವಾಗಿದೆಯೋ ಅವರು ಮಾತ್ರ ದೀರ್ಘಾಯುಸ್ಸನ್ನು ಹೊಂದಲು ಸಾಧ್ಯ. ಹಾಗಾಗಿ ಕರೊನಾಕ್ಕೆ ಹೆದರಿ ನಮ್ಮ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಹಾಳುಮಾಡಿಕೊಳ್ಳಬಾರದು. ಹಾಗೆಂದು ಅಲಕ್ಷ್ಯ ಮಾಡುವುದೂ ಸರಿಯಲ್ಲ. ಸರ್ಕಾರ ಸೂಚಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಲೇಬೇಕು. ವೈರಸ್ ನಮ್ಮ ದೇಹ ಪ್ರವೇಶಿಸದಂತೆ ಎಲ್ಲ ರೀತಿಯ ಕಾಳಜಿ ವಹಿಸುವುದು ನಮ್ಮ ಆದ್ಯತೆಯಾಗಬೇಕು. ಇದು ಈ ಸಮಯದಲ್ಲಿ ನಾವು ಅನುಸರಿಸಬೇಕಾದ ಮೊದಲ ವಿಧಾನ.
ಒಂದುವೇಳೆ ಆ ವೈರಸ್ ನಮ್ಮ ದೇಹ ಹೊಕ್ಕರೆ ಎರಡನೇ ವಿಧಾನದ ಅಗತ್ಯ ಎದುರಾಗುತ್ತದೆ. ಅದು, ನಮ್ಮ ದೇಹದಲ್ಲಿ ವೈರಸ್ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಇತ್ತೀಚಿನ ಕೆಲವು ಸಂಶೋಧನೆಗಳ ಅಭಿಪ್ರಾಯದಂತೆ - ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಝಿಂಕ್ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಅದು ಕರೊನಾ ವಿರುದ್ಧ ಹೋರಾಡಲು ತುಂಬ ಸಹಾಯವಾಗುತ್ತದೆ. ಇದನ್ನು ಹಲವಾರು ವೈದ್ಯವಿಜ್ಞಾನಿಗಳೂ ಅನುಮೋದಿಸಿದ್ದಾರೆ. ಈ ಸಂಶೋಧನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಹಾಗೂ ಇದನ್ನು ಖಚಿತವಾಗಿ ಒಪ್ಪಲು ಅಸಾಧ್ಯ. ಆದರೆ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಲಾಭವಾಗದಿದ್ದರೂ ನಷ್ಟವಂತೂ ಉಂಟಾಗದು.
ಮೊದಲನೆಯದಾಗಿ ವಿಟಮಿನ್ ಸಿ ಬಗ್ಗೆ ನೋಡೋಣ. ಬಹುತೇಕ ಎಲ್ಲ ಆಹಾರಗಳನ್ನೂ ಬೇಯಿಸಿ ತಿನ್ನುವ ಕಾರಣ ನಮಗೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತಿಲ್ಲ. ಹಸಿ ಬೆಟ್ಟದ ನೆಲ್ಲಿಕಾಯಿ, ಎಲ್ಲ ರೀತಿಯ ಹುಳಿ ಹಣ್ಣುಗಳು, ಕೆಲವು ಗುಲಾಬಿ ಗಿಡಗಳ ಹಣ್ಣು (ರೋಸ್ ಹಿಪ್), ಪಪ್ಪಾಯ, ಸೀಬೆ (ಪೇರಲ) ಹಣ್ಣು - ಹೀಗೆ ನಮ್ಮ ಸುತ್ತಮುತ್ತ ಸಿಗುವ, ತಿನ್ನಲು ಯೋಗ್ಯವಾದ ಎಲ್ಲ ರೀತಿಯ ಹಣ್ಣುಗಳಲ್ಲಿ ವಿಟಮಿನ್ ಸಿ ಸಿಗುತ್ತದೆ. ಒಬ್ಬ ಮನುಷ್ಯನಿಗೆ ಸಾಕಾಗುವಷ್ಟು ವಿಟಮಿನ್ ಸಿ ಹೊಟ್ಟೆಗೆ ಸೇರಬೇಕೆಂದರೆ 29 ಕಿತ್ತಳೆ ಹಣ್ಣುಗಳು ಬೇಕಾಗುತ್ತವೆ. ಅಂದರೆ ನಮ್ಮ ವಿಟಮಿನ್ ಸಿ ಸೇವನೆಯ ಪ್ರಮಾಣ ಎಷ್ಟು ಕಡಿಮೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ವಿಟಮಿನ್ ಸಿ ಮಾತ್ರೆಗಳನ್ನು ಸೇವಿಸುವುದಾದರೆ ಸಾಮಾನ್ಯವಾಗಿ ದಿನಕ್ಕೆ 1000 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳಬೇಕಾಗುತ್ತದೆ.
ಸೂರ್ಯನ ಬೆಳಕು ಚರ್ಮದ ಮೇಲೆ ಬಿದ್ದಾಗ ದೇಹ ಡಿ ವಿಟಮಿನ್ ಉತ್ಪಾದಿಸುತ್ತದೆ. ಕೆಲವು ರೀತಿಯ ಮಾಂಸಾಹಾರಗಳಿಂದಲೂ ವಿಟಮಿನ್ ಡಿ ಉತ್ಪಾದನೆಯಲ್ಲಿ ಸಹಾಯವಾಗುತ್ತದೆ. ಆದರೆ ಅಷ್ಟೇ ಸಾಕಾಗುವುದಿಲ್ಲ. ಸೂರ್ಯನ ಬೆಳಕು ಅವಶ್ಯ. ನಮ್ಮಲ್ಲಿ ಬಹುತೇಕ ಜನ ಸೂರ್ಯನ ಬೆಳಕಿಗೆ ಹೋಗುವುದು ತುಂಬ ಕಡಿಮೆ. ಹಾಗಾಗಿ ಬಿಸಿಲಿನಲ್ಲಿ ದುಡಿಯುವವರನ್ನು ಬಿಟ್ಟರೆ ಉಳಿದವರೆಲ್ಲರಿಗೂ ವಿಟಮಿನ್ ಡಿ ಮಾತ್ರೆಗಳ ಅಗತ್ಯ ಕಂಡುಬರುತ್ತಿದೆ. ಈ ಸಮಯದಲ್ಲಿ ಕುಟುಂಬ ವೈದ್ಯರ ಜತೆ ಸಮಾಲೋಚನೆ ನಡೆಸಿದ ನಂತರವೇ ವಿಟಮಿನ್ ಡಿ ಮಾತ್ರೆಗಳನ್ನು ಸೇವಿಸಬೇಕು. ನಿತ್ಯವೂ ಸ್ವಲ್ಪ ಸಮಯವಾದರೂ ಬಿಸಿಲಿಗೆ ಹೋಗುವ ರೂಢಿ ಮಾಡಿಕೊಳ್ಳಬೇಕು.
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಝಿಂಕ್ ಮಹತ್ವದ ಪಾತ್ರ ವಹಿಸುತ್ತದೆ. ದೇಸಿ ಹಸುವಿನ ಹಾಲು, ತುಪ್ಪ, ಪಾಲಿಶ್ ಮಾಡದ ಕೆಂಪಕ್ಕಿ, ದ್ವಿದಳ ಧಾನ್ಯಗಳು, ಶೇಂಗಾ, ಗೋಡಂಬಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಓಟ್ಸ್ಗಳಲ್ಲಿ ನಮಗೆ ಝಿಂಕ್ ಸಿಗುತ್ತದೆ. ಮಾಂಸಾಹಾರಿಗಳು ಮೀನು, ಮೊಟ್ಟೆ, ಆಡಿನ ಮಾಂಸ, ಚಿಕನ್ ಸೇವಿಸಬಹುದು. ಈ ಮೂರು ರೀತಿಯ ಪೋಷಕಾಂಶಗಳನ್ನು ಸೇವಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ.