ನ್ಯೂಸ್

ಪ್ರಧಾನಿ ಪ್ರಮಾಣವಚನಕ್ಕೆ ಯಾರಿಗೆಲ್ಲಾ ಆಹ್ವಾನ?; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ನವದೆಹಲಿ: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾನುವಾರ (ಜೂನ್ 09) ರ ಸಂಜೆ 7:15ಕ್ಕೆ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರು ಸೇರಿದಂತೆ ವಿಶೇಷ ಆಹ್ವಾನಿತರು ಭಾಗಿಯಾಗಲಿದ್ದಾರೆ. ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ 8-9 ಸಾವಿರ ಮಂದಿ ಭಾಗಿಯಾಗುತ್ತಿದ್ದು, ಇದಕ್ಕಾಗಿ ರಾಷ್ಟ್ರಪತಿ ಭವನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅರೆಸೇನಾಪಡೆ, ದೆಹಲಿ ಸಶಸ್ತ್ರ ಪೊಲೀಸ್ ಹೀಗೆ ಭದ್ರತೆಗಾಗಿ 2,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಣ್ಯರ ಮಾರ್ಗದಲ್ಲಿ ಸ್ನೈಪರ್‍ಗಳು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ಉಳಿಯುವ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‍ಗಳಲ್ಲೂ ಜಿ20 ಮಾದರಿಯಲ್ಲೇ ವಿಶೇಷ ಭದ್ರತೆ ನಿಯೋಜನೆ ಮಾಡಲಾಗಿದೆ.

ಯಾರಿಗೆಲ್ಲಾ ಆಹ್ವಾನ?

ಇನ್ನು ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರು ಸೇರಿದಂತೆ ಪೌರ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆ, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಮಿಕರು, ತೃತೀಯ ಲಿಂಗಿಗಳು, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ವಂದೇ ಭಾರತ್​ ಲೋಕೋ ಪೈಲಟ್​, ಉತ್ತರಾಖಂಡ್ ಗಣಿ ಕಾರ್ಮಿಕರ ರಕ್ಷಿಸಿದ ತಂಡ, ವಂದೇ ಭಾರತ್, ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದವರು, ಎಲ್ಲಾ ಧರ್ಮಗಳ 50 ಧರ್ಮ ಗುರುಗಳಿಗೂ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪುರಸ್ಕೃತರಿಗೆ, ವಿಕಸಿತ ಭಾರತ್ ಅಂಬಾಸಿಡರ್​​ ಹಾಗೂ ಆದಿವಾಸಿ ಮಹಿಳೆಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಸೀಷೆಲ್ಸ್ ಅಧ್ಯಕ್ಷ ವಾವೆಲ್ ರಾಮ್‍ಕಾಲಾವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿದೆ.