ನ್ಯೂಸ್

ಗಣೇಶೋತ್ಸವಕ್ಕೆ ಮೂರು ಸಾವಿರ ಪೊಲೀಸರು

ಶಿವಮೊಗ್ಗ: ಗಣೇಶೋತ್ಸವ ಸಂದರ್ಭ ಸುಮಾರು ಮೂರು ಸಾವಿರ ಪೊಲೀಸ್ ಸಿಬ್ಬಂದಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಆಗಮಿಸಿ ಬಂದೋಬಸ್ತ್‌ನಲ್ಲಿ ಸಹಕರಿಸಲಿದ್ದಾರೆ. ಸಾವಿರಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸಣ್ಣ ಪುಟ್ಟ ವ್ಯತ್ಯಾಸಗಳಾದಲ್ಲಿ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಇರಲಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದರು.

ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ 3,500ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತಿತ್ತು. ಈ ವರ್ಷ 3,600 ಮೂರ್ತಿಗಳು ಪ್ರತಿಷ್ಠಾಪನೆಯಗುವ ನಿರೀಕ್ಷೆ ಇದೆ. ಸುಮಾರು 45 ದಿನಗಳು ಸತತವಾಗಿ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತ ರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಹಬ್ಬದಾಚರಣೆ, ಅಲಂಕಾರ ಹಾಗೂ ಇತರೆ ಯಾವುದೇ ವಿಚಾರಗಳ ಕುರಿತು ಯಾರೊಂದಿಗಾದರೂ ಸಮಸ್ಯೆಗಳು ಉಂಟಾದರೆ ಕೂಡಲೇ ಪೊಲೀಸ್ ಇಲಾಖೆ ಸಂಪರ್ಕಿಸಿದರೆ ಕಾನೂನಿನ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಎಸ್ಪಿ ಎ.ಜಿ.ಕಾರಿಯಪ್ಪ, ಎಸ್.ರಮೇಶ್‌ಕುಮಾರ್, ಡಿವೈಎಸ್ಪಿ ಬಾಬು ಅಂಜನಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಪಾಟೀಲ್ ಇದ್ದರು.