ನ್ಯೂಸ್

ಶ್ರೀಲಂಕಾದ ಮೂವರು ಪಾಲಕಿಗಳು ಸಿಸಿಬಿ ಬಲೆಗೆ; ಟಾರ್ಗೆಟ್ ಯಾರಾಗಿದ್ದರು..?

ಬೆಂಗಳೂರು: ರಾಜಧಾನಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಶ್ರೀಲಂಕಾ ಮೂಲದ ಮೂವರು ಕುಖ್ಯಾತ ಪಾತಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದ ಕೊಲಂಬೊ ಮೂಲದ ಖಸನ್ ಕುಮಾರ್ ಸಂಕ, ಅಮಿಲ್ ನೋವಾನ್ ಅಸಂಕ ಮತ್ತು ರಂಗಪ್ರಸಾದ್ ಬಂಧಿತರು. 13 ಮೊಬೈಲ್‌ಗಳು, ನಕಲಿ ಗುರುತಿನ ಚೀಟಿ, ದಾಖಲೆ ಪತ್ರಗಳನ್ನು ಜಪ್ತಿಯಾಗಿವೆ. 15 ದಿನಗಳಿಂದ ಜಕ್ಕೂರು ಸಮೀಪ ತಮಿಳುನಾಡು ಮೂಲದ ಪರಮೇಶ ಅಲಿಯಾಸ್ ಜಯಪರಮೇಶ್ ಫ್ಲಾೃಟ್‌ನಲ್ಲಿ ಪಾತಕಿಗಳು ತಂಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಕ, ಅಸಂಕ ಮತ್ತು ರಂಗಪ್ರಸಾದ್ ಕ್ರಿಮಿನಲ್‌ಗಳು ಹಿನ್ನಲೆಯುವಳ್ಳರಾಗಿದ್ದು, ಬೆಂಗಳೂರು ಮೂಲದ ಎಲ್‌ಇಡಿ ಉದ್ಯಮಿ ಜಲಾಲ್ ಮೂಲಕ ನಗರಕ್ಕೆ ಬಂದಿದ್ದರು. ಈ ಮೂವರ ಪೈಕಿ ಅಸಂಕ ವಿರುದ್ಧ 5 ಕೊಲೆ ಪ್ರಕರಣಗಳು, ಸಂಕ ವಿರುದ್ಧ 4 ಕೊಲೆ ಪ್ರಕರಣಗಳು ಹಾಗೂ 2 ಕೊಲೆ ಪ್ರಕರಣಗಳಲ್ಲಿ ರಂಗಪ್ರಸಾದ್ ಆರೋಪಿಯಾಗಿದ್ದಾನೆ.

ಕೆಲ ದಿನಗಳ ಹಿಂದೆ ಕೊಲಂಬದಿಂದ ಅಕ್ರಮವಾಗಿ ಹಡಗಿನಲ್ಲಿ ತಮಿಳುನಾಡಿನ ರಾಮೇಶ್ವರಕ್ಕೆ ಬಂದಿದ್ದ ಶ್ರೀಲಂಕಾದ ಪಾತಕಿಗಳು, ಅಲ್ಲಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಜಕ್ಕೂರಿನಲ್ಲಿದ್ದ ಪರಮೇಶನ ಫ್ಲಾೃಟ್‌ನಲ್ಲಿ ವಾಸವಾಗಿದ್ದರು.

ಎಚ್‌ಎಲ್‌ಎ ಸಮೀಪದ ನಿವಾಸಿ ಪರಮೇಶ ಸಹ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, 2015ರಲ್ಲಿ ಎಚ್‌ಎಎಲ್ ಸಮೀಪದ ನಡೆದಿದ್ದ ಅಲೆಕ್ಸ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಮೇಶ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಮೇಲೆ ಅಪರಾಧದಿಂದ ದೂರ ಉಳಿದಿದ್ದ ಪರಮೇಶ ಉದ್ಯಮಿ ಜಲಾಲ್ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ತನ್ನ ಬಾಸ್ ಜಲಾಲ್ ಸೂಚನೆ ಮೇರೆಗೆ ಶ್ರೀಲಂಕಾದ ಪ್ರಜೆಗಳನ್ನು ಕರೆತಂದು ತನ್ನ ಮನೆಯಲ್ಲಿ ಆಶ್ರಯ ಕೊಟ್ಟಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಜಲಾಲ್ ಪತ್ತೆಯಾದ ಬಳಿಕ ಶ್ರೀಲಂಕಾದ ಪಾತಕಿಗಳ ಜೊತೆಗಿನ ಆತನ ನಂಟು ಗೊತ್ತಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.