ಬೆಂಗಳೂರು: ತಮಿಳುನಾಡಿನ ಡಿಎಂಕೆ ಮುಖಂಡ ಹಾಗೂ ಮಧುರೈ ಕಾರ್ಪೋರೇಷನ್ ಮಾಜಿ ಅಧ್ಯಕ್ಷ ವಿ.ಕೆ.ಗುರುಸ್ವಾಮಿ ಹತ್ಯೆಗೆ ಯತ್ನಿಸಿದ ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿದೆ. ತಮಿಳುನಾಡಿನಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮತ್ತು ಎಐಡಿಎಂಕೆ ಮುಖಂಡ ಪಾಂಡಿಯನ್ ನಡುವೆ ೩೫ ವರ್ಷಗಳಿಂದ ಗಲಾಟೆ ನಡೆಯುತ್ತಿದೆ. ಪಾಂಡಿಯನ್ ಮತ್ತು ತಂಡ ಗುರುಸ್ವಾಮಿ ಹತ್ಯೆಗೆ ನಿರಂತವಾಗಿ ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ಪಾಂಡಿಯನ್ ಗ್ಯಾಂಗ್ ಸೋಮವಾರ ಸಂಜೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಗುರುಸ್ವಾಮಿ ಹೋಟೆಲ್‌ನಲ್ಲಿ ಟೀ ಕುಡಿಯುವಾಗ ಮಾರಕಾಸ್ತ್ರಗಳಿಂದ ಹತ್ಯೆಗೆ ಯತ್ನಿಸಿದ್ದರು.
ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಹಲವು ರಾಜಕೀಯ ಮುಖಂಡರ ಆಪ್ತನಾಗಿ ಗುರುತಿಸಿಕೊಂಡು ಅಪರಾಧ ಹಿನ್ನೆಲೆಯನ್ನೂ ಹೊಂದಿದ್ದಾನೆ. ಇವನ ವಿರುದ್ಧ ಕಿರುತರೈ ಠಾಣೆಯಲ್ಲಿ ರೌಡಿಶೀಟ್ ಸಹ ಇದ್ದು, ಎಂಟು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಘಟನೆ ನಡೆದ ಕೂಡಲೇ ನಗರ ಪೊಲೀಸರು ತಮಿಳುನಾಡು ಪೊಲೀಸರಿಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ತಮಿಳುನಾಡಿನ ಟೋಲ್ ಗೇಟ್ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನಕ್ಕೆ ಮುಂದಾಗಿದ್ದಾರೆ. ಆದರೆ, ಆರೋಪಿಗಳು ಸ್ಥಳೀಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂಬುದು ಗೊತ್ತಾಗಿದೆ. ಮತ್ತೊಂದೆಡೆ ಬೆಂಗಳೂರು ಪೊಲೀಸರು ಆರೋಪಿಗಳ ಶೋಧ ಕಾರ್ಯ ಮುಂದುವರಿಸಿದ್ದಾರೆ.