ಬೆಂಗಳೂರು: ರಾಜಧಾನಿಯಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ.
ಕ್ಯಾಂಟರ್ ವಾಹನ ಚಕ್ರ ಹರಿದ ಪರಿಣಾಮ ಮಹಿಳಾ ಟೈಲರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆ.ಗೊಲ್ಲಹಳ್ಳಿ ನಿವಾಸಿ ಮಂಜುಳಾ(೪೦) ಮೃತ ಮಹಿಳೆ. ಕೃತ್ಯ ಎಸಗಿದ ಕ್ಯಾಂಟರ್ ಚಾಲಕ ಜಾನಕಿರಾಮನ್ ಎಂಬಾತನನ್ನು ಬಂಧಿಸಲಾಗಿದೆ. ಮಂಡ್ಯ ಮೂಲದ ಮಂಜುಳಾ ಕೆ.ಗೊಲ್ಲಹಳ್ಳಿಯಲ್ಲಿ ಮಕ್ಕಳ ಜತೆ ವಾಸವಾಗಿದ್ದು, ಟೈಲರಿಂಗ್ ಕೆಲಸ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಉತ್ತರಹಳ್ಳಿ ಕಡೆಯಿಂದ ಮೈಸೂರು ಮುಖ್ಯರಸ್ತೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸಾವನ ದರ್ಬಾರ ಆಶ್ರಮದ ಹತ್ತಿರ ತಿರುವು ಪಡೆಯುವಾಗ, ಅದೇ ಮಾರ್ಗದಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಕ್ಯಾಂಟರ್, ಮಂಜುಳಾ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಮಂಜುಳಾ ಮೇಲೆಯೇ ಕ್ಯಾಂಟರ್‌ನ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ:
ಮತ್ತೊಂದು ಪ್ರಕರಣದಲ್ಲಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾರೆ.
ಚನ್ನೇನಹಳ್ಳಿ ನಿವಾಸಿ ನಾರಾಯಣಸ್ವಾಮಿ (೩೯) ಮೃತ ಬೈಕ್ ಸವಾರ. ಘಟನೆಯಲ್ಲಿ ಮತ್ತೊಂದು ಬೈಕ್ ಸವಾರ ರಾಜಕುಮಾರ್(೪೦) ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿರುವ ನಾರಾಯಣಸ್ವಾಮಿ ಫೆ.೧೬ ರಂದು ರಾತ್ರಿ ೭ಗಂಟೆ ಸುಮಾರಿಗೆ ಚನ್ನೇನಹಳ್ಳಿ ಸಮೀಪದ ಕೆರೆ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ವೇಳೆ ಎದುರುಗಡೆಯಿಂದ ಮತ್ತೊಂದು ಬೈಕ್‌ನಲ್ಲಿ ರಾಜಕುಮಾರ್ ಬರುತ್ತಿದ್ದ. ಈ ವೇಳೆ ಇಬ್ಬರು ನಿಯಂತ್ರಿಸಲು ಸಾಧ್ಯವಾಗದೆ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿದ್ದಾರೆ. ಪರಿಣಾಮ ನಾರಾಯಣಸ್ವಾಮಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿ ಸಾವು:
ಇನ್ನೊಂದು ಪ್ರಕರಣದಲ್ಲಿ ಸಹೋದ್ಯೋಗಿಗಳಿಬ್ಬರು ತಮ್ಮ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾರೆ.
ಯಲಹಂಕದ ಮೀನಕುಂಟೆ ನಿವಾಸಿ ದೇವರಾಜ್(೩೨) ಮೃತರು. ಘಟನೆಗೆ ಕಾರಣನಾದ ರಾಜೇಶ್ ಎಂಬಾತನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜೇಶ್ ಮತ್ತು ದೇವರಾಜು ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ೭ ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ತಮ್ಮ ತಮ್ಮ ಬೈಕ್‌ಗಳಲ್ಲಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಬಳ್ಳಾರಿ ಮುಖ್ಯರಸ್ತೆಯ ಬಚ್ಚಹಳ್ಳಿ ಸೇತುವೆ ಬಳಿ ಅತೀವೇಗವಾಗಿ ಬಂದ ರಾಜೇಶ್, ಮುಂದೆ ಹೋಗುತ್ತಿದ್ದ ದೇವರಾಜ್ ಬೈಕ್‌ಗೆ ನಿಯಂತ್ರಿಸಲು ಸಾಧ್ಯವಾಗದೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ದೇವರಾಜ್ ತಲೆ ಮತ್ತು ಕೈ-ಕಾಲುಗಳಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.