ಚಂಡೀಗಢ: ಪಂಜಾಬ್ನ ಬಠಿಂಡಾ ಮತ್ತು ದೆಹಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆದ ಆರೋಪದ ಮೇಲೆ ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮೂವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಗುಪ್ತಚರ ದಳದ ಘಟಕ ಹಾಗೂ ಬಠಿಂಡಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ. ಏಪ್ರಿಲ್ 27 ರಂದು ಬಠಿಂಡಾದಲ್ಲಿರುವ ಜಿಲ್ಲಾ ಆಡಳಿತ ಸಂಕೀರ್ಣ ಮತ್ತು ನ್ಯಾಯಾಲಯದ ಸಂಕೀರ್ಣದ ಗೋಡೆಗಳ ಮೇಲೆ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು.
ದೆಹಲಿಯಲ್ಲಿ ಕಂಡ ಖಲಿಸ್ತಾನ್ ಪರ ಘೋಷಣೆಗಳು: ಮೇ 9ರಂದು ಇದೇ ರೀತಿಯ ಘೋಷಣೆಗಳು ದೆಹಲಿಯ ಝಂಡೆವಾಲ್ನ ಮತ್ತು ಕರೋಲ್ ಬಾಗ್ ಮೆಟ್ರೊ ನಿಲ್ದಾಣಗಳಲ್ಲೂ ಕಂಡು ಬಂದಿದ್ದವು.
ದೆಹಲಿ ಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಮತ್ತು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಬರೆಯಲಾಗಿದೆ. ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳು ಕಂಡುಬಂದಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯವರು ಈ ಘೋಷಣೆಗಳನ್ನು ಬರೆದಿದ್ದಾರೆ ಎನ್ನಲಾಗಿದೆ. ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಅವರ ತನಿಖೆಗೆ ಸಹಾಯ ಮಾಡಲು ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.