Srinagar Kitty 
ನ್ಯೂಸ್

Srinagar Kitty - ಕಿಟ್ಟಿ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್​ ಉಡುಗೊರೆ

Srinagar Kitty -
ನಟ ಶ್ರೀನಗರ ಕಿಟ್ಟಿಗೆ ಈ ವರ್ಷದ ಹುಟ್ಟುಹಬ್ಬ ತುಂಬ ಸ್ಪೆಷಲ್​. ಏಕೆಂದರೆ, ಬುಧವಾರ (ಜು. 8) ಅವರ 49ನೇ ವಸಂತಕ್ಕೆ ಕಾಲಿರಿಸಿದ ಅವರ ಹುಟ್ಟುಹಬ್ಬವನ್ನು ಮೂರು ಚಿತ್ರತಂಡಗಳು ಒಂದೇ ವೇದಿಕೆಯಲ್ಲಿ ಸಡಗರದಿಂದ ಆಚರಿಸಿವೆ. ಹೌದು, ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಬಗ್ಗೆ ರಚಿಸಿದ್ದ "ವೇಷಗಳು' ಕಥೆ ಆಧರಿಸಿದ ಅದೇ ಹೆಸರಿನ ಸಿನಿಮಾ, "ಲವ್​ ಕೇಸ್​' ಮತ್ತು "ಮದರ್​ ಲವ್​' ತಂಡಗಳು ಒಂದೇ ವೇದಿಕೆಯಲ್ಲಿ ತಮ್ಮ ನಾಯಕ ನಟನ ಹುಟ್ಟುಹಬ್ಬ ಆಚರಿಸಿದವು. ಈ ಸಂದರ್ಭದಲ್ಲಿ ಖುದ್ದು ಕಿಟ್ಟಿ ಧ್ವನಿಯಾಗಿರುವ "ವೇಷಗಳು' ಚಿತ್ರದ ಹಾಡನ್ನು ಬಿಡುಗಡೆ ಮಾಡಲಾಯಿತು. ಕಿಶನ್​ ರಾವ್​ ದಳವಿ ಚಿತ್ರಕಥೆ ಬರೆದು ಆ್ಯಕ್ಷನ್​&ಕಟ್​ ಹೇಳುತ್ತಿರುವ "ವೇಷಗಳು' ಚಿತ್ರದಲ್ಲಿ ಕಿಟ್ಟಿ ಬಸಪ್ಪ ಮತ್ತು ಬಸಮ್ಮ ಜೋಗತಿ ಹೀಗೆ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 12 ದಿನಗಳ ಮೊದಲ ಹಂತದ ಶೂಟಿಂಗ್​ ಪೂರ್ಣಗೊಂಡಿದೆ. "ಎರಡನೇ ಹಂತದಲ್ಲಿ ಸವದತ್ತಿ ಮತ್ತು ಉತ್ತರ ಭಾರತದ ಮಹಾಕಾಲೇಶ್ವರದಲ್ಲಿ ಕಿಟ್ಟಿಯವರ ಭಾಗದ ಚಿತ್ರೀಕರಣ ನಡೆಯಲಿದೆ. ಬಹುತೇಕ ಬಳ್ಳಾರಿ ಕನ್ನಡದಲ್ಲೇ ಸಿನಿಮಾ ಸಾಗಲಿದೆ' ಎಂದು ಕಿಶನ್​ ಹೇಳಿಕೊಂಡರು. ಶ್ರೀನಗರ ಕಿಟ್ಟಿ, "ಮೂರೂ ಚಿತ್ರತಂಡದವರು ಒಟ್ಟಿಗೆ ಸೇರಿ ನನ್ನ ಹುಟ್ಟುಹಬ್ಬ ಆಚರಿಸಿದ್ದು ತುಂಬ ಖುಷಿ ನೀಡಿದೆ. ಮೂರು ಸಿನಿಮಾಗಳು ಚೆನ್ನಾಗಿ ಮೂಡಿಬರುತ್ತಿವೆ. ಬೇರೆ ಭಾಷೆಯ ಚಿತ್ರಗಳನ್ನು ಹೊಗಳುವುದಲ್ಲ. ಕನ್ನಡದಲ್ಲೂ ಒಳ್ಳೆ ನಿರ್ದೇಶಕರಿದ್ದಾರೆ, ಉತ್ತಮ ಸಿನಿಮಾಗಳು ಬರುತ್ತಿವೆ' ಎಂದರು.