ನ್ಯೂಸ್

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ದೌರ್ಜನ್ಯ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಮೂವರು ಹುಡುಗರು ಅಂದರ್!

ಮಹಾರಾಷ್ಟ್ರ: ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಮೂವರು ಅಪ್ರಾಪ್ತರು ಅತ್ಯಾಚಾರ ಎಸಗಿರುವ ಅಮಾನುಷ ಘಟನೆಯೊಂದು ತಡವಾಗಿ ವರದಿಯಾಗಿದೆ. ಈ ಘಟನೆ ಮುಂಬೈನ ಘಾಟ್​ಕೋಪರ್ ಪ್ರದೇಶದಲ್ಲಿ ನಡೆದಿದೆ. ಪ್ರಕೃತಿಯ ಕರೆಗೆ ಹೋಗಿದ್ದಾಗ ಈ ಭೀಕರ ಘಟನೆ ನಡೆದಿದೆ.

ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡುವ ಉದ್ಧೇಶದಿಂದ ಮೂವರು ಅಪ್ರಾಪ್ತರು ಶೌಚಾಲಯಕ್ಕೆ ಎಳೆದೊಯ್ದಿದ್ದಾರೆ. ಅಲ್ಲದೆ ಅತ್ಯಾಚಾರ ಎಸಗುತ್ತಿರುವುದನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಹರಿಬಿಟ್ಟಿದ್ದಾರೆ. ಈ ವಿಡಿಯೋವನ್ನು ಮಾನಸಿಕ ಅಸ್ವಸ್ಥ ಬಾಲಕಿಯ ಅಣ್ಣ ನೋಡಿದ್ದಾನೆ. ಕೂಡಲೇ ತನ್ನ ಸಹೋದರಿಯ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ಪಾಲಕರಿಗೆ ತಿಳಿಸಿದ್ದಾನೆ.

ಈ ಬಗ್ಗೆ ಘಾಟ್​​ಕೋಪರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಅಪ್ರಾಪ್ತರಾಗಿದ್ದು, ಅವರನ್ನು ರಿಮ್ಯಾಂಡ್ ಹೋಮ್​ಗೆ ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)