ಬೆಂಗಳೂರು: ದೇಶದಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ ಪ್ರಕರಣ ಸಂಬಂಧ ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರ ಸಂಘಟನೆಯ ಮೂವರು ದೋಷಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹೋಮಿಯೋಪತಿ ವೈದ್ಯ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೂರ್ ಮತ್ತು ಸದ್ದಾಂ ಹುಸೇನ್ ದೋಷಿಗಳು. ಇದೇ ಪ್ರಕರಣದಲ್ಲಿ ಮತ್ತಿಬ್ಬರನ್ನು ಆರೋಪ ಮುಕ್ತಗೊಳಿಸಿದ್ದು, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ.
2015ರಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಎಡಿಜಿಪಿ ಎಂ. ಚಂದ್ರ ಸೇಖರ್ ಸೂಚನೆ ಮೇರೆಗೆ ಇನ್‌ಸ್ಪೆಕ್ಟರ್ (ಈಗಿನ ಹಾಸನ ಜಿಲ್ಲಾ ಹೆಚ್ಚುವರಿ ಎಸ್‌ಪಿ) ಎಂ.ಕೆ. ತಮ್ಮಯ್ಯ ನೇತೃತ್ವದ ತಂಡ ಪುಲಿಕೇಶಿನಗರ ಮತ್ತು ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಐಎಂ ಉಗ್ರರನ್ನು ಸೆರೆ ಹಿಡಿದು ಅಪಾರ ಪ್ರಮಾಣ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿತ್ತು.
ತನಿಖೆ ನಡೆಸಿ ಕೋರ್ಟ್‌ಗೆ 2 ಸಾವಿರಕ್ಕೂ ಅಧಿಕ ಪುಟಗಳ ಆರೋಪಪಟ್ಟಿಯನ್ನು ಎಂ.ಕೆ. ತಮ್ಮಯ್ಯ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶಂಕರ್ ಬಿಕ್ಕಣ್ಣವರ್ ವಾದಿಸಿದ್ದರು. 9 ವರ್ಷ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪ ನೀಡಿದೆ. 2014ರ ಡಿಸೆಂಬರ್ 30ರಂದು ಎಂ.ಜಿ. ರಸ್ತೆಯ ಚರ್ಚ್ ಸ್ಟ್ರೀಟ್ ಹೋಟೆಲ್ ಬಳಿ ಬಾಂಬ್ ಸ್ಫೋಟವಾಗಿತ್ತು. ಈ ವಿಧ್ವಂಸಕ ಕೃತ್ಯದ ಹಿಂದೆ ಭಟ್ಕಳ ನಂಟಿನ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗೆ ಇಳಿದ ಸಿಸಿಬಿ, 2015ರ ಜನವರಿ 9ರಂದು ಪುಲಿಕೇಶಿನಗರದಲ್ಲಿ ವೈದ್ಯ ಅಫಾಕ್, ಅಬ್ದುಲ್ ಸುಬೂರ್ ಮತ್ತು ಭಟ್ಕಳದಲ್ಲಿ ಸದ್ದಾಂನನ್ನು ಬಂಧಿಸಿತ್ತು. ತನಿಖೆ ವೇಳೆ ದೇಶದ ವಿವಿಧೆಡೆ ಎಂಐ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಉಗ್ರ ವೈದ್ಯ ಅಫಾಕ್ ತಂಡ ಪೂರೈಸಿದ್ದ ಮಹತ್ವದ ಸಂಗತಿ ಬಯಲಾಗಿತ್ತು.
2003ರಲ್ಲಿ ಐಎಂ ಉಗ್ರ ಸಂಘಟನೆಯನ್ನು ಭಟ್ಕಳದ ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೋದರರು ಹುಟ್ಟು ಹಾಕಿದ್ದರು. ಈ ಸಂಘಟನೆಗೆ ಹೋಮಿಯೋಪತಿ ಡಾ. ಅಫಾಕ್ ಸೇರಿ ತಮ್ಮ ಊರಿನ ಮುಸ್ಲಿಂ ಯುವಕರಿಗೆ ಜಿಹಾದ್ ಬೋಧಿಸಿ ನೇಮಿಸಿಕೊಂಡಿದ್ದರು. ಅಫಾಕ್‌ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಭಟ್ಕಳ್ ಸೋದರರು ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಿದ್ದರು. ಅದೇ ವೇಳೆ ಪಾಕಿಸ್ತಾನದ ಯುವತಿಯನ್ನು ವಿವಾಹವಾದ ಅಫಾಕ್, ಕೆಲ ತಿಂಗಳ ಬಳಿಕ ಆಕೆ ಜತೆ ಭಟ್ಕಳಕ್ಕೆ ಮರಳಿ ನೆಲೆಸಿದ್ದ. ನಂತರ ಭಟ್ಕಳದಲ್ಲಿ ಜಿಲೆಟಿನ್ ಬಳಸಿ ಬಾಂಬ್‌ಗಳನ್ನು ತಯಾರಿಸಿ ಐಎಂ ಶಂಕಿತ ಉಗ್ರರಿಗೆ ಅಫಾಕ್ ತಂಡ ರವಾನಿಸುತ್ತಿತ್ತು. ಈ ಸ್ಫೋಟಕ ವಸ್ತುಗಳಿಗೆ ಟೈಮರ್ ಫಿಕ್ಸೃ್ ಮಾಡಿ ಶಂಕಿತ ಉಗ್ರರು ವಿಧ್ವಂಸಕ ಕೃತ್ಯ ನಡೆಸಿದ್ದರು.
2006-14ವರೆಗೆ ಹೈದರಾಬಾದ್, ಪುಣೆ ಹಾಗೂ ದೆಹಲಿ ಸೇರಿ ದೇಶದ ವಿವಿಧೆಡೆ ಐಎಂ ನಡೆಸಿದ್ದ ಉಗ್ರ ಕೃತ್ಯಗಳಿಗೆ ಅಫಾಕ್ ತಂಡವೇ ಸ್ಫೋಟಕ ವಸ್ತುಗಳನ್ನು ಪೂರೈಸಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಲ್ಯಾಪ್‌ಟಾಪ್‌ನಲ್ಲಿ ಸಿಕ್ಕಿದ್ದ ಪುರಾವೆ
ಡಾ. ಅಫಾಕ್ ಮನೆಯಲ್ಲಿ ಜಪ್ತಿಯಾದ ಲ್ಯಾಪ್‌ಟಾಪ್‌ನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಾಂಬ್ ಪೂರೈಕೆ ಕುರಿತು ಪುರಾವೆ ಸಿಕ್ಕಿತ್ತು. ಉಗ್ರ ಯಾಸಿನ್ ಜತೆ ಅಫಾಕ್ ನಡೆಸಿದ್ದ ಚಾಟಿಂಗ್, ಪಾಕಿಸ್ತಾನ ಹಾಗೂ ದುಬೈಗೆ ಪ್ರಯಾಣಿಸಿದ್ದ ವಿಮಾನ ಟಿಕೆಟ್‌ಗಳನ್ನು ಪಾಕಿಸ್ತಾನದ ರಾವುಲ್‌ಪಿಂಡಿಯಿಂದ ಭಟ್ಕಳ್ ಸೋದರರು ಬುಕ್ ಮಾಡಿದ್ದರು. ಇಂಡಿಯನ್ ಏರ್‌ಲೈನ್ಸ್ ನೀಡಿದ ಐಪಿ ಅಡ್ರೆಸ್ ರಾವುಲ್‌ಪಿಂಡಿ ವಿಳಾಸ ಪತ್ತೆಯಾಯಿತು. ಈತ ಕರಾಚಿಯಲ್ಲಿ ಮದುವೆ ಆಗಿದ್ದು, 2 ಸಾವಿರ ಕಿ.ಮೀಟರ್ ದೂರವಿದ್ದ ರಾವುಲ್‌ಪಿಂಡಿಯಲ್ಲಿ ವಿಮಾನ ಟಿಕೆಟ್ ಯಾಕೇ ಬುಕ್ ಆಗುತ್ತಿತ್ತು ಎಂಬುದು ಸ್ಪಷ್ಟವಾಗಿತ್ತು.
ಸಪ್ಲೈಯರ್ ಡಾಕ್ಟರ್
ಭಟ್ಕಳ್ ಸಹೋದರರು ದೇಶದ ವಿವಿಧೆಡೆ ನಡೆಸಿದ ಬಾಂಬ್ ಸ್ಫೋಟಕ ಕೃತ್ಯಗಳಿಗೆ ಡಾ. ಅಾಕ್ ಪೂರೈಕೆದಾರನಾಗಿದ್ದ. ಪ್ರತಿ ಕೃತ್ಯ ನಡೆದಾಗ ಬಂಧಿತರು ಡಾಕ್ಟರ್ ಎಂದಷ್ಟೇ ಹೇಳುತ್ತಿದ್ದರು. ಆದರೆ, ಭಟ್ಕಳದ ಡಾ.ಸೈಯದ್ ಇಸ್ಮಾಯಿಲ್ ಅಫಾಕ್ ಎಂಬುದು ಸುಳಿವು ತಿಳಿಸುತ್ತಿರಲಿಲ್ಲ.
ಕೊನೆಗೆ ಸಿಸಿಬಿ ಪೊಲೀಸರು ಡಾ.ಅಫಾಕ್ ಮನೆ ಮೇಲೆ ದಾಳಿ ನಡೆಸಿದಾಗ 100 ಜಿಲೆಟಿನ್ ಕಡ್ಡಿಗಳು ಹಾಗೂ ಟೈಮರ್‌ಗಳು ಸೇರಿ ಸ್ಫೋಟಕ ವಸ್ತುಗಳು ಸಿಕ್ಕಿದ್ದವು. ಸ್ಫೋಟಕ ವಸ್ತುಗಳ ತಯಾರಿಕೆಗೆ ಬಳಸಿದ್ದ ಕಚ್ಚಾ ವಸ್ತುಗಳು ಪತ್ತೆ ಆಗಿದ್ದವು. ಭಳ್ಕರ್ ಸಹೋದರರ ಸೂಚನೆಯಂತೆ ಶಿವಮೊಗ್ಗದಿಂದ ಜಿಲಿಟಿನ್ ಕಡ್ಡಿಗಳನ್ನು ತಂದು ಸದ್ದಾಂ ಹುಸೇನ್ ಸಂಗ್ರಹಿಸಿಟ್ಟಿದ್ದ.
ಒಬಾಮ ಭೇಟಿ ವೇಳೆ ಸ್ಫೋಟಕಕ್ಕೆ ಸಂಚು
2015ರ ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಐಎಂ ಸಂಚು ರೂಪಿಸಿದ್ದ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಇದು ಡಾ. ಅಫಾಕ್ ಜತೆ ಯಾಸಿನ್ ನಡೆಸಿದ್ದ ಚಾಟಿಂಗ್ ನಡೆಸಿದ್ದರು. ಇದಕ್ಕಾಗಿ ಸ್ಫೋಟಕ ವಸ್ತುಗಳನ್ನು ಅಫಾಕ್ ಸಂಗ್ರಹಿಸಿದ್ದ. ಡಾ. ಅಾಕ್ ಗ್ಯಾಂಗ್ ಬಂಧನದ ಬಳಿಕ ಭಟ್ಕಳ್ ಸಹೋದರರ ಐಎಂ ಗ್ಯಾಂಗ್‌ನಿಂದ ಯಾವುದೇ ವಿಧ್ವಂಸಕ ಕೃತ್ಯ ನಡೆಸಿಲ್ಲ.