ವಾರಣಾಸಿ: ಇತ್ತೀಚಿನ ದಿನಗಳಲ್ಲಿ ಈ ಸೆಲ್ಫಿ ಎಂಬ ಖಾಯಿಲೆ ಬಹಳ ವೇಗವಾಗಿ ಯುವಜನತೆಯನ್ನು ಆವರಿಸಿಕೊಂಡಿದ್ದು, ಅನೇಕ ದುರಂತ ಅಂತ್ಯಗಳಿಗೆ ಕಾರಣವಾಗುತ್ತಿದೆ. ಇದೀಗ ಅದೇ ರೀತಿಯಲ್ಲಿ ಮೂವರು ವಿದ್ಯಾರ್ಥಿಗಳು ಒಂದೇ ಒಂದು ಸೆಲ್ಫಿಗಾಗಿ ಆಯಾತಪ್ಪಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಸೇವಾ ಮನೋಭಾವದ ವೈದ್ಯರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ
ಗಂಗಾ ನದಿಯ ದಂಡೆಯ ತುದಿಯಲ್ಲಿ ನಿಂತಿದ್ದ ಯುವತಿಯೊಬ್ಬಳು ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಹೊರಬಂದಿದ್ದಳು. ಈ ವೇಳೆ ನಾವು ಮೂವರು ಒಂದು ಸೆಲ್ಫಿ ತೆಗೆದುಕೊಳ್ಳೋಣ ಬನ್ನಿ ಎಂದ ಯುವತಿ ಆಯಾತಪ್ಪಿ ನೀರಿಗೆ ಬಿದ್ದಿದ್ದಾಳೆ. ತಕ್ಷಣವೇ ಗಾಬರಿಗೊಂಡ ಇನ್ನಿಬ್ಬರು ವಿದ್ಯಾರ್ಥಿಗಳು ಸ್ನೇಹಿತೆಯನ್ನು ಕಾಪಾಡುವ ಉದ್ದೇಶದಿಂದ ನದಿಗೆ ಜಿಗಿದಿದ್ದಾರೆ. ಆದ್ರೆ, ದುರಾದೃಷ್ಟವಶಾತ್ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ವಾರಣಾಸಿ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಎನ್ಡಿಆರ್ಎಫ್ ಪಡೆಯ ಸಹಾಯದಿಂದ ಯುವತಿಯ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಇನ್ನಿಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಈ ದುರ್ಘಟನೆ ಶನಿವಾರ ಮಧ್ಯರಾತ್ರಿ 1:30ಕ್ಕೆ ಗಂಗಾ ನದಿಯ ಘಾಟ್ ಬಳಿ ಸಂಭವಿಸಿದೆ ಎಂದು ಹೇಳಲಾಗಿದ್ದು, ಮೃತ ವಿದ್ಯಾರ್ಥಿಗಳನ್ನು ರಿಷಿ (21) ಮತ್ತು ಸೋನಾ ಸಿಂಗ್ (19) ಮತ್ತು ವೈಭವ್ ಸಿಂಗ್ ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).