ಸಾಗರದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಅಪಾಯದ ಅಂಚಿನಲ್ಲಿರುವ ಮರದ ರೆಂಬೆಗಳನ್ನು ತೆರವು ಮಾಡುತ್ತಿರುವುದು.  
ನ್ಯೂಸ್

ಮಳೆಯಿಂದ ಮೂರು ಮನೆಗಳು ನಷ್ಟ

ಶಿವಕುಮಾರ ಎಸ್.ಪಿ.

ಸಾಗರ:ತಾಲೂಕಿನಲ್ಲಿ ಮಳೆ ಬಿರುಸಾಗಿದ್ದು, ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿವಿಧೆಡೆ ಮನೆಗಳ ಮೇಲೆ ಬಿದ್ದ ಮರಗಳನ್ನು ತೆರವು ಮಾಡಲಾಗುತ್ತಿದೆ.

ಶನಿವಾರ ಕುದುರೂರು ಗ್ರಾಮದ ಹಾಲಪ್ಪ ಎಂಬುವರ ಮನೆ ಹಾನಿಗೀಡಾಗಿದೆ. ತಳಕಳಲೆ ಗ್ರಾಮದ ಅತ್ತಿಗೋಡು ಯೋಗರಾಜ್ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಜಖಂ ಆಗಿದೆ. ಭಾನುವಾರ ಅದರಂತೆ ಗ್ರಾಮದ ಕೊಂಡಿಕಾರು ಸರಸ್ವತಿ ಎಂಬುವರ ಮನೆ ಮೇಲೆ ಮರ ಬಿದ್ದಿದೆ.

ಮಳೆ-ಗಾಳಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ಮೇಲೆ ಮರಗಳು ಬೀಳುತ್ತಿವೆ. ಕರೂರು ಹೋಬಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ದುರಸ್ತಿ ಕಾರ್ಯದಲ್ಲಿ ತೊಡಗಿವೆ ಎಂದು ತಹಸೀಲ್ದಾರ್ ಚಂದ್ರಶೇಖರ ನಾಯ್ಕ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಸ್ವಚ್ಛತಾ ಕಾರ್ಯಕ್ಕೆ 27 ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. 140 ಮಂದಿ ಕಸ ವಿಲೇವಾರಿ ಕೆಲಸದಲ್ಲಿ ತೊಡಗಿದ್ದಾರೆ. ಇದಕ್ಕಾಗಿ 20 ವಾಹನಗಳನ್ನು ಮೀಸಲಿಡಲಾಗಿದೆ. ರಸ್ತೆ ಮೇಲೆ ಬೀಳುವಂತಿದ್ದ ಮರದ ರೆಂಬೆಗಳನ್ನು ಕತ್ತರಿಸಲಾಗುತ್ತಿದೆ. ರಸ್ತೆಯ ಮೇಲೆ ನೀರು ನಿಂತು ಪಾದಚಾರಿ ಹಾಗೂ ವಾಹನಗಳ ಓಡಾಡಕ್ಕೆ ತೊಂದರೆ ಉಂಟಾಗಿತ್ತು. ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾಹಿತಿ ನೀಡಿದರು.