ನ್ಯೂಸ್

ಪಾರ್ಕ್​ ಮಾಡಿದ್ದ ಕೆಂಪು ಬಣ್ಣದ ಕಾರಿನ ಬಾಗಿಲು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!

ವಿಶಾಖಪಟ್ಟಣಂ: ಮನೆಯ ಮುಂದಿನ ಕಾರಿನಲ್ಲಿ ಮಕ್ಕಳು ಆಡುವಾಗ ಪಾಲಕರು ಎಚ್ಚರಿಕೆ ವಹಿಸುವುದು ತುಂಬಾನೇ ಅವಶ್ಯಕ. ನಮ್ಮ ಕಣ್ಣ ಮುಂದೆಯೇ ಸಾಕಷ್ಟು ಅವಘಡಗಳು ಸಂಭವಿಸಿರುವಾಗ ಸ್ವಲ್ಪ ಯಾಮಾರಿದ್ರೂ ಏನಾಗಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.

ಮನೆಯ ಸಮೀಪ್​ ಪಾರ್ಕ್​ ಮಾಡಿದ್ದ ಕೆಂಪು ಬಣ್ಣದ ಕಾರನ್ನೇರಿದ ಮೂವರು ಬಾಲಕಿಯರು ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಬಾಪುಲಾಪಾಡು ಮಂಡಲದ ರೆಮಾಲ್ಲೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೂವರು ಬಾಲಕಿಯರು ಸಹ 6 ಮತ್ತು 8ರ ನಡುವಿನ ವಯೋಮಾನದವರು. ಅವರನ್ನು ಅಪ್ಸಾನಾ, ಯಾಸ್ಮಿನ್​ ಮತ್ತು ಪರ್ವೀನ್​ ಎಂದು ಗುರುತಿಸಲಾಗಿದೆ.

ಮೃತ ಮಕ್ಕಳು ವಲಸೆ ಕಾರ್ಮಿಕ ಕುಟುಂಬದವರಾಗಿದ್ದು, ಬೇರೆ ರಾಜ್ಯದ ನಿವಾಸಿಗಳಾಗಿದ್ದರು. ಇಬ್ಬರು ಮಕ್ಕಳ ಪಾಲಕರು ಅಸ್ಸಾಂ ಮೂಲದವರಾಗಿದ್ದು, ಇನ್ನೊರ್ವ ಬಾಕಿಯ ಪಾಲಕರು ಪಶ್ಚಿಮ ಬಂಗಾಳದವರು.

ಘಟನೆ ಬಗ್ಗೆ ವೃತ್ತ ನಿರೀಕ್ಷಕ ಡಿ.ವಿ. ರಾಮಣ್ಣ ಅವರು ಮಾತನಾಡಿ, ಮಕ್ಕಳು ಮನೆಯ ಬಳಿಯಿದ್ದ ಕಾರಿನಲ್ಲಿ ಆಡುವಾಗ ಬಾಗಿಲು ಆಕಸ್ಮಿಕವಾಗಿ ಲಾಕ್​ ಆಗಿದೆ. ಅಲ್ಲಿಂದ ಹೊರಬರಲಾಗದೇ ಆಮ್ಲಜನಕ ಕೊರೆತಯಿಂದ ಉಸಿರಾಡಲು ಆಗದೇ ಸಾವಿಗೀಡಾಗಿದ್ದಾರೆ. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ಗ್ರಾಮದಲ್ಲಿನ ಕಾರ್ಮಿಕರ ಕ್ವಾರ್ಟರ್ಸ್​ನ ಹೊರಭಾಗದಲ್ಲಿ ಸಂಭವಿಸಿದೆ.

ಸಾಕಷ್ಟು ಸಮಯವಾದರೂ ಮಕ್ಕಳು ಮನೆಗೆ ಬರದೇ ಇರುವುದನ್ನು ನೋಡಿ ಪಾಲಕರು ಕಂಗಾಲಾಗಿ ಹುಡುಕಾಡಿದ್ದಾರೆ. ಸುತ್ತಮುತ್ತಲಿನ ಎಲ್ಲರನ್ನೂ ವಿಚಾರಿಸಿ, ಸುಮಾರು 1 ಗಂಟೆಯವರೆಗೂ ಹುಡುಕಾಡಿ ಕೊನೆಗೆ ಅನುಮಾನದಿಂದ ಸಮೀಪದಲ್ಲೇ ಇದ್ದ ಕಾರಿನ ಬಳಿ ಹೋದಾಗ ಪಾಲಕರಿಗೆ ಶಾಕ್​ ಆಗಿದೆ. ಒಳಗೆ ಪ್ರಜ್ಞ್ನೆಯಿಲ್ಲದೇ ಮಕ್ಕಳು ಬಿದ್ದಿರುವುದನ್ನು ನೋಡಿ ಕಾರಿನ ಬಾಗಿಲು ತೆರೆದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಮಕ್ಕಳ ಸಾವಿನ ಸುದ್ದಿ ಕೇಳಿದ ಪಾಲಕರ ಆಕ್ರಂದನ ಸ್ಥಳದಲ್ಲೇ ಮುಗಿಲು ಮುಟ್ಟಿದೆ.

ಅಂದಹಾಗೆ ಕಾರಿನ ಚಾಲಕ ಪ್ರಯಾಣಿಕರ ಕಡೆಗಿನ ಬಾಗಿಲನ್ನು ಸರಿಯಾಗಿ ಲಾಕ್​ ಮಾಡಿರಲಿಲ್ಲ. ಹೀಗಾಗಿಯೇ ಮಕ್ಕಳು ಕಾರು ಪ್ರವೇಶಿಸಲು ಸಲೀಸಾಗಿದೆ. ಆದರೆ, ತಕ್ಷಣ ಲಾಕ್​ ಆಗಿದ್ದರಿಂದ ಹೊರಬರಲು ಪರದಾಡಿದ್ದಾರೆ. ಕೊನೆಗೆ ಪ್ರಾಣವೇ ಹೋಗಿದೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)