ನ್ಯೂಸ್

ನರಕಕ್ಕೆ ಮೂರು ದ್ವಾರಗಳು

ಸುದೀಪ್​ ವಿ.ಎನ್​
ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ | ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ ತ್ಯಜೇತ್ || 16.21||

ಕಾಮ, ಕ್ರೋಧ ಹಾಗೂ ಲೋಭ - ನರಕಕ್ಕೆ ಇವು ಮೂರು ದ್ವಾರ ಗಳು. ಇವು ಆತ್ಮನ ನಾಶಕ್ಕೆ ಕಾರಣವಾಗುತ್ತವೆ. ಆದ್ದರಿಂದ ಈ ಮೂರನ್ನೂ ತ್ಯಜಿಸಬೇಕು. ವಸ್ತುವೊಂದರ ಮೇಲೆ ವ್ಯಕ್ತಿಯಲ್ಲಿ ಸದಾ ಬಯಕೆಯುಂಟಾಗುತ್ತಿದ್ದರೆ, ಅದು ಕಾಮ. ಇಲ್ಲಿ ಕಾಮವೆಂದರೆ ಆಸೆ. ಆ ವಸ್ತುವನ್ನು ಪಡೆದಾಗ ಮತ್ತೆ ಅದನ್ನು ಪಡೆಯಬೇಕು, ಅನುಭವಿಸಬೇಕು ಎಂಬ ಬಯಕೆಯುಂಟಾಗುತ್ತದೆ. ಅದರಿಂದ ಲೋಭವುಂಟಾಗುತ್ತದೆ. ಆ ಆಸೆಯು ತೀರದಿದ್ದಾಗ ಕ್ರೋಧವು ಏಳುತ್ತದೆ. ಕೋಪದಿಂದ ವಿವೇಕವು ನಾಶವಾಗಿ, ಅಚಾತುರ್ಯ ಎಸಗುವಂತಾಗುತ್ತದೆ. ಗುಂಡ ಎಂಬ ಶ್ರೀಮಂತನೊಬ್ಬ ಮಹಿಷಪುರಿಯಲ್ಲಿ ನೆಲೆಸಿದ್ದ. ಅವನು ಬಡ್ಡಿ ವ್ಯಾಪಾರ ಮಾಡುತ್ತಿದ್ದ. ಬಡ್ಡಿಯನ್ನು ಜನರು ಹಿಂತಿರುಗಿಸದಿದ್ದರೆ ಒಂದೆರಡು ಬಾರಿ ಅವಕಾಶಗಳನ್ನು ನೀಡುತ್ತಿದ್ದ.

ಕೊಡದೇ ಇದ್ದಲ್ಲಿ ಅವನ ಬಳಿಯಿದ್ದ ಮೂರು ಜನ ಗೂಂಡಾಗಳನ್ನು ಕಳುಹಿಸಿ ಹಣಕೊಡಬೇಕಾದವನನ್ನು ಹೊಡೆದು, ಮನೆಯಲ್ಲಿದ್ದ ಸಾಮಾನು, ಬೆಲೆಬಾಳುವ ವಸ್ತುಗಳನ್ನು ನಿರ್ದಾಕ್ಷಿಣ್ಯವಾಗಿ ತರಿಸಿಕೊಳ್ಳುತ್ತಿದ್ದ. ಒಮ್ಮೆ ದೂರದ ನಗರದಲ್ಲಿ ವ್ಯಕ್ತಿಯೊಬ್ಬ ಗುಂಡನಿಂದ ಸಾಲವನ್ನು ಪಡೆದ. ಆದರೆ ಅನೇಕ ಸಮಯ ಬಡ್ಡಿಯಾಗಲೀ, ಅಸಲಾಗಲೀ ಕೊಡಲಿಲ್ಲ. ಬಡ್ಡಿ, ಚಕ್ರಬಡ್ಡಿ ಸೇರಿ ಹಣದ ಮೊತ್ತವು ಬಹಳಷ್ಟಾಗಿತ್ತು. ಗುಂಡನು ಕೆಲವು ಬಾರಿ ಹೇಳಿ ಕಳುಹಿಸಿದ, ಕೊನೆಯ ಅವಕಾಶ ಎಂದೂ ಎಚ್ಚರಿಸಿದ. ಆದರೆ ಪ್ರಯೋಜನವಾಗಲಿಲ್ಲ. ಆದ್ದರಿಂದ ಗುಂಡ ಮತ್ತು ಅವನ ಗೂಂಡಾಗಳು ಹೋಗಿ ಅವನನ್ನು ಹಿಗ್ಗಾ-ಮುಗ್ಗಾ ಥಳಿಸಿದರು. ಮನೆಯಲ್ಲಿದ್ದ ಸಂಪತ್ತನ್ನೆಲ್ಲಾ ದೋಚಿ ಅದರ ಗಂಟು ಗಳನ್ನು ಹೊತ್ತು ನಡೆದರು. ದಾರಿಯಲ್ಲಿ ವಿಶ್ರಾಂತಿಗೆಂದು ಕುಳಿತರು. ಗುಂಡನು ನಿದ್ದೆಗೆ ಜಾರಿದನು. ಗೂಂಡಾಗಳು ನಾವು ನಮ್ಮ ಯಜಮಾನನನ್ನು ಕೊಂದರೆ ಈ ಎಲ್ಲಾ ಸಂಪತ್ತು ನಮಗೆ ದಕ್ಕುತ್ತದೆ ಎಂದು ನಿದ್ರಿಸುತ್ತಿದ್ದ ಯಜಮಾನನ್ನು ಹತ್ಯೆಗೈದರು. ಸಂಪತ್ತನ್ನು ಹಂಚಿಕೊಂಡು ಪರಾರಿಯಾದರು. ಇಲ್ಲಿ ಗುಂಡನೇ ಮನುಷ್ಯ. 3 ಜನ ಗೂಂಡಾಗಳೇ ಕಾಮ, ಕ್ರೋಧ, ಲೋಭಗಳು.