ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳ ವಿರುದ್ಧ ಬೆಂಗಳೂರಿನಲ್ಲಿ ಏ.28ರಿಂದ ಮೂರು ದಿನಗಳ ಕಾಲ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾಹಿತಿ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬಿಬಿಎಂಪಿ ಎಲ್ಲ ವಲಯ ಆಯುಕ್ತರ ಕಚೇರಿಯ ಮುಂದೆ ಈ ಪ್ರತಿಭಟನೆ ನಡೆಯಲಿದೆ. ಬಿಬಿಎಂಪಿ ಚುನಾವಣೆ ಮುಂದೂಡುವ ಸರ್ಕಾರದ ಧೋರಣೆ ಬಗ್ಗೆ ಪ್ರತಿ ಮನೆಗೆ ತೆರಳಿ ಕರಪತ್ರ ಹಂಚಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಾಲು, ವಿದ್ಯುತ್, ಆಸ್ತಿ ತೆರಿಗೆ ಹಾಗೂ ಪಾರ್ಕಿಂಗ್ ಶುಲ್ಕ ಹೆಚ್ಚಿಸಿ ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್ ಭರಪೂರ ತೆರಿಗೆಗಳ ಭಾರ ಹೊರಿಸಿದೆ ಎಂದು ಟೀಕಿಸಿದರು.
ಪಕ್ಷದ 18 ಶಾಸಕರ ಅಮಾನತು ತೆರವಿಗಾಗಿ ಸ್ಪೀಕರ್ ತೆ ಚರ್ಚಿಸಲಾಗಿದೆ. ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ಯೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇದು ಅಸಂವಿಧಾನಿಕವಾದ ಕ್ರಮ ಎಂದು ಆರ್.ಅಶೋಕ್ ಆಕ್ಷೇಪಿಸಿದರು.
ಭಯೋತ್ಪಾದಕ ದಾಳಿಯನ್ನು ದೇಶ ಒಂದಾಗಿ ಖಂಡಿಸಬೇಕು. ಆದರೆ ಕಾಂಗ್ರೆಸ್ ನಾಯಕರು ಯೋಧರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಬೇಹುಗಾರಿಕೆ, ಭದ್ರತಾ ವೈಲ್ಯವೆಂದು ಟೀಕಿಸಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟವಾದಾಗ ಯಾರು ವಿಫಲರಾಗಿದ್ದರು? ಕುಕ್ಕರ್ ಬಾಂಬ್ ಸ್ಪೋಟಗೊಂಡಾಗ ಯಾರು ವಿಫಲರಾಗಿದ್ದರು? ಸಚಿವರ ವಿರುದ್ಧ ಹನಿಟ್ರ್ಯಾಪ್ ನಡೆಯುತ್ತಿರುವಾಗ ಯಾರು ವಿಫಲರಾಗಿದ್ದಾರೆ? ಎಂದು ಆರ್.ಅಶೋಕ್ ಕೇಳಿದರು.
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್‌ಗಳನ್ನು ಮಟ್ಟ ಹಾಕಬೇಕಿದೆ. ಅವರಿಗೆ ನೆರವು ಕೊಡುವುದು, ಬೇಲ್ ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಕೂಡ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದನ್ನು ನೆನಪಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ ವಿರುದ್ಧ ಕಾನೂನು ಸಮರ ನಡೆಸಲು ಬಿಜೆಪಿ ಸಜ್ಜಾಗಿದೆ. ಈ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್ ಪರ ಎನ್ನುತ್ತಾರೆ, ಸಹಿ ಹಾಕದೇ ಇದ್ದರೆ ಅದು ಬಿಜೆಪಿ ಕಚೇರಿ ಎಂದು ಟೀಕಿಸುತ್ತಾರೆ ಎಂದು ಛೇಡಿಸಿದರು.