ನ್ಯೂಸ್

ವಿದ್ಯಾರ್ಥಿಗಳ ಸುಲಿಗೆ ಮಾಡಿದ್ದ ಮೂವರ ಸೆರೆ

ಮಂಜುನಾಥ.ಕೆ

ಬೆಂಗಳೂರು: ಪ್ರವಾಸಕ್ಕೆ ತೆರಳಲು ಕಾರು ಬಾಡಿಗೆಗೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಂದ್ರಾಲೇಔಟ್ ನಿವಾಸಿಗಳಾದ ನಿತಿನ್(೩೨), ಶಶಾಂಕ್(೩೪) ಮತ್ತು ವಿನೋದ್(೩೦) ಬಂಧಿತರು. ಆರೋಪಿಗಳಿಂದ ೩೦ ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ನ.೧೭ರಂದು ಐವರು ವಿದ್ಯಾರ್ಥಿಗಳನ್ನು ಕಚೇರಿಯೊಂದರಲ್ಲಿ ಕೂಡಿ ಹಾಕಿ ೫೦ ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿ ಮನೋಜ್ ಬನಿವಾಲ್ ಹಾಗೂ ಆತನ ನಾಲ್ವರು ಸ್ನೇಹಿತರು ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾರೆ. ನ.೧೭ರಂದು ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರು ಮಡಿಕೇರಿಗೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಿದ್ದರು. ಸ್ನೇಹಿತರ ಮುಖಾಂತರ ಆರೋಪಿ ವಿನೋದ್‌ನನ್ನು ಸಂಪರ್ಕಿಸಿ ಒಂದು ದಿನದ ಪ್ರವಾಸಕ್ಕೆ ಕಾರನ್ನು ಬಾಡಿಗೆಗೆ ಕೇಳಿದ್ದಾರೆ.

ಒಂದು ದಿನದ ಪ್ರವಾಸಕ್ಕೆ ೨,೫೦೦ ರೂ. ಬಾಡಿಗೆ ಜತೆಗೆ ೫೦೦ ರೂ. ಕಮಿಷನ್ ಸೇರಿ ಒಟ್ಟು ೩ ಸಾವಿರ ರೂ. ಕೊಡುವಂತೆ ವಿನೋದ್ ಕೇಳಿದ್ದ. ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದರು. ಕಾರನ್ನು ಗಂಟೆಗೆ ೧೦೦ ಕಿ.ಮೀ. ಗರಿಷ್ಠ ವೇಗದಲ್ಲಿ ಚಲಾಯಿಸಬೇಕು ಎಂದು ವಿನೋದ್ ಷರತ್ತು ವಿಧಿಸಿದ್ದ. ಶ್ಯೂರಿಟಿಗಾಗಿ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್ ಪಡೆದುಕೊಂಡಿದ್ದ. ಬಳಿಕ ಷರತ್ತಿಗೆ ಒಪ್ಪಿದ ವಿದ್ಯಾರ್ಥಿಗಳು ಕಾರನ್ನು ಬಾಡಿಗೆಗೆ ಪಡೆದು ಮಡಿಕೇರಿ ಪ್ರವಾಸಕ್ಕೆ ತೆರಳಿದ್ದಾರೆ.

ವೇಗ ಮೀತಿ ದಾಟಿದ್ದೀರಿ ಎಂದು ಸುಲಿಗೆ:

ಮಡಿಕೇರಿ ಪ್ರವಾಸ ಮುಗಿಸಿಕೊಂಡು ಸಂಜೆ ನಗರಕ್ಕೆ ವಾಪಾಸಾದ ವಿದ್ಯಾರ್ಥಿಗಳು, ಕಾರನ್ನು ವಾಪಾಸ್ ನೀಡಲು ವಿನೋದ್‌ನನ್ನು ಸಂಪರ್ಕಿಸಿದ್ದಾರೆ. ಈ ವೇಳೆ ನಾಗರಬಾವಿ ಮುಖ್ಯರಸ್ತೆಯ ಮಂಜುನಾಥ ಎಂಟರ್‌ಪ್ರೈಸಸ್ ಎಂಬ ಕಚೇರಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು, ನೀವು ಪ್ರವಾಸದ ವೇಳೆ ಕಾರನ್ನು ೧೨೦ ಬಾರಿ ಗರಿಷ್ಟ ವೇಗದ ಮಿತಿ ದಾಟಿರುವಿರಿ. ಹೀಗಾಗಿ ೧.೨೦ ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಗರಿಷ್ಠ ವೇಗ ಮೀತಿ ಮೀರಿದ ಚಲನ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿಗಳು ಯಾವುದೇ ಚಲನ್ ತೋರಿಸದೆ ೧.೨೦ ಲಕ್ಷ ರೂ. ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಕಚೇರಿಯಲ್ಲೇ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ. ಅಂತೆಯೆ ವಿದ್ಯಾರ್ಥಿಗಳ ಖಾತೆಯಿಂದ ೫೦ ಸಾವಿರ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೆ, ಕಾಲೇಜು ಬಳಿ ಬಂದು ಚಿತ್ರಹಿಂಸೆ ನೀಡುವುದಾಗಿ ಬೆದರಿಕೆ ಹಾಕಿ ತಡರಾತ್ರಿ ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.