ಬೆಂಗಳೂರು: ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ಬಿಲ್ಡರ್‌ಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರೌಡಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣೆ ರೌಡಿಶೀಟರ್ ರಕ್ಷಿತ್, ದೀಪಕ್ ಬಂಧಿತರು. ಜೈಹಿಂದ್ ಸಂಘಟನೆ ಸ್ಥಾಪಿಸಿದ್ದ ದೀಪಕ್, ತಾನು ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ. ಈತನಿಗೆ ರೌಡಿಶೀಟರ್ ರಕ್ಷಿತ್ ಸಹಕಾರ ಕೊಡುತ್ತಿದ್ದ. ವೆಸ್ಟ್ ಎಫ್ ಕಾರ್ಡ್ ರಸ್ತೆಯ ಬಿಂದು ಡೆವಲಪರ್ಸ್ ಕಚೇರಿಯ ಮಾಲೀಕರಿಗೆ ಬೆದರಿಕೆ ಒಡ್ಡಿದ್ದರು. ‘ನಿಮ್ಮ ಸಂಸ್ಥೆಯಿಂದ ಬಿಬಿಎಂಪಿ ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ಕೊಟ್ಟು ಯೋಜನೆ ಸ್ಥಗಿತ ಮಾಡಿಸಬೇಕಾಗುತ್ತದೆ. ಸುಮ್ಮನೆ ಇರಬೇಕಾದರೆ 80 ಲಕ್ಷ ರೂ. ಕೊಡಬೇಕು’ ಎಂದು ಧಮ್ಕಿ ಹಾಕಿದ್ದರು. ಈ ಬಗ್ಗೆ ಬಿಲ್ಡರ್ ಕೊಟ್ಟ ದೂರಿನ ಮೇರೆಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಈ ಹಿಂದೆ ಆರ್‌ಟಿಐ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ರಕ್ಷಿತ್ ಭಾಗಿಯಾಗಿದ್ದ. ಇದಾದ ಮೇಲೆ ದೀಪಕ್ ಜೊತೆ ಸೇರಿ ರಾಜಾಜಿನಗರ, ವಿಜಯನಗರ, ಮಾಗಡಿ ರಸ್ತೆ ಮುಂತಾದೆಡೆ ದೊಡ್ಡ ದೊಡ್ಡ ಬಿಲ್ಡರ್‌ಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.