ಯಮುನಾ ನದಿಗೆ ಕಸ ಎಸೆಯುತ್ತಿದ್ದವನ ಪ್ರಶ್ನಿಸಿದ ಕ್ರಿಯೇಟರ್‌ಗೆ ಬೆದರಿಕೆ WEB
ನ್ಯೂಸ್

ಯಮುನೆಗೆ ಕಸ ಎಸೆದು ಪ್ರಶ್ನಿಸಿದವನಿಗೇ ಧಮ್ಕಿ! ಚಪ್ಪಲಿ ತೋರಿಸಿ ಹಲ್ಲೆ ಬೆದರಿಕೆ | Yamuna Pollution

Yamuna Pollution: ಯಮುನಾ ನದಿಗೆ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ಕಂಟೆಂಟ್ ಕ್ರಿಯೇಟರ್‌ಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನದಿ ಮಾಲಿನ್ಯ ಮತ್ತು ಸಾರ್ವಜನಿಕವಾಗಿ ಪ್ರಶ್ನಿಸುವವರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಕಂಟೆಂಟ್ ಕ್ರಿಯೇಟರ್ ಕಮಲ್ ಚೌಧರಿ ದಾಖಲಿಸಿರುವ ವಿಡಿಯೋದಲ್ಲಿ, ಫ್ಲೈಓವರ್‌ನಿಂದ ಯಮುನಾ ನದಿಗೆ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಅವರು ಪ್ರಶ್ನಿಸುವುದು ಕಾಣಿಸುತ್ತದೆ. ನದಿಗೆ ಕಸ ಹಾಕುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ, ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಅವರು ಆ ವ್ಯಕ್ತಿಗೆ ತಿಳಿಸಲು ಪ್ರಯತ್ನಿಸಿದ್ದಾರೆ.

ಚಪ್ಪಲಿಯಿಂದ ತೋರಿಸಿ ಬೆದರಿಕೆ

ಆದರೆ ಇದಕ್ಕೆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದು, ಕಮಲ್ ಜತೆ ವಾಗ್ವಾದ ನಡೆಸಿದ್ದಾನೆ. ನಿಂದನೆ ಮಾಡಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಅಲ್ಲದೆ, ಬ್ಯಾಟ್ ತೆಗೆದು ಬೆದರಿಸಿದ್ದಾನೆ ಎಂದು ಕಮಲ್ ಆರೋಪಿಸಿದ್ದಾರೆ.

ನೆಟ್ಟಿಗರಿಂದ ಕ್ರಮಕ್ಕೆ ಆಗ್ರಹ

ಪರಿಸರ ಸಂಬಂಧಿತ ಸಮಸ್ಯೆಗಳ ಬಗ್ಗೆ ವಿಡಿಯೋ ಮಾಡುತ್ತಿರುವ ಕಮಲ್, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಘಟನೆಯನ್ನು ಚಿತ್ರೀಕರಿಸಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. 'ನದಿ ಮತ್ತು ಪರಿಸರ ಉಳಿಸಲು ಧ್ವನಿ ಎತ್ತುವುದು ಅಪರಾಧವೇ?' ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಕಮಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ನದಿಗೆ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಮಿತ್ ಕಿಲ್ಹೋರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದ ವ್ಯಕ್ತಿಗಳೂ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಪ್ರಸಾದ ಈಗ ಮನೆ ಬಾಗಿಲಿಗೆ; QR ಕೋಡ್ ಬುಕಿಂಗ್ ವ್ಯವಸ್ಥೆ ಶುರು | Sabarimala Prasadam

ದೆಹಲಿಯಲ್ಲಿ ಯಮುನಾ ನದಿ ಮಾಲಿನ್ಯ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಂಸ್ಕರಿಸದ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಘನತ್ಯಾಜ್ಯ ನದಿಯ ನೀರಿನ ಗುಣಮಟ್ಟ ಹದಗೆಡಲು ಪ್ರಮುಖ ಕಾರಣಗಳಾಗಿವೆ.