ನ್ಯೂಸ್

ತಿರುಚಿದ ಅಶ್ಲೀಲ ವಿಡಿಯೋ ತೋರಿಸಿ ಹಣಕ್ಕಾಗಿ ಧಮ್ಕಿ

ಬೆಂಗಳೂರು: ತಿರುಚಿದ ವಿಡಿಯೋ ತೋರಿಸಿ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಹೆಣ್ಬಲೆ (ಹನಿಟ್ರ್ಯಾಪ್) ಬೀಸಲು ಯತ್ನಿಸಿದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ಅಜಯ್ ಮತ್ತು ಅಭಿ ಬಂಧಿತರು. 2 ಕೋಟಿ ರೂ.ಗೆ ಬೇಡಿಕೆಯೊಡ್ಡಿ, ಕೊನೆಗೆ 40 ಲಕ್ಷ ರೂ. ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಧಮ್ಕಿ ಹಾಕಿದ್ದರು. ಈ ಬಗ್ಗೆ 68 ವರ್ಷದ ನಿವೃತ್ತ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾವಣಗೆರೆ ಮೂಲದ ನಿವೃತ್ತ ಇಂಜಿನಿಯರ್‌ಗೆ ಅಜಯ್ ಕರೆ ಮಾಡಿ, ಜಿಲ್ಲಾ ಕೋರ್ಟ್ ಬಳಿಗೆ ಬರುವಂತೆ ಸೂಚಿಸಿದ್ದ.

ಅಲ್ಲಿಗೆ ಹೋದಾಗ ಆರೋಪಿಗಳು, ‘ನಿಮ್ಮ ಅಶ್ಲೀಲ ವಿಡಿಯೋ ನಮ್ಮ ಬಳಿ ಇವೆ’ ಎಂದು ಮಾತುಕತೆ ನಡೆಸಿ ಹೋಗಿದ್ದರು. ಮತ್ತೆ 10 ದಿನಗಳ ಬಳಿಕ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಹೋಟೆಲ್‌ವೊಂದರ ಬಳಿ ಕರೆದು ಮತ್ತೆ ಅದೇ ವಿಚಾರ ಪ್ರಸ್ತಾಪಿಸಿದ್ದರು. ಮಾ.13ರಂದು ಎಡಿಟ್ ಮಾಡಿರುವ ವಿಡಿಯೋವನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿ, ತಕ್ಷಣ ಡಿಲೀಟ್ ಮಾಡಿದ್ದರು. 16ರಂದು ವಾಟ್ಸ್‌ಆ್ಯಪ್ ಕರೆ ಮಾಡಿ, 2 ಕೋಟಿ ರೂ. ನೀಡದಿದ್ದರೆ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ತಿಳಿಸಿದ್ದರು. 17ರಂದು ಕೋರಮಂಗಲದ ಕಾಫಿ ಬಾರ್ ಬಳಿ ದೂರದಾರನನ್ನು ಭೇಟಿ ಮಾಡಿದ ಆರೋಪಿಗಳು, 2 ಕೋಟಿ ರೂ. ಬದಲಿಗೆ 40 ಲಕ್ಷ ರೂ. ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಆಮಿಷವೊಡ್ಡಿದ್ದರು.

ನೊಂದ ನಿವೃತ್ತ ಇಂಜಿನಿಯರ್, ಕೋರಮಂಗಲ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಕೆಲ ಸಾಕ್ಷಾೃಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.