Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಹಲವು ಸುತ್ತು ಗುಂಡು ಹಾರಿಸಿ ಸುಮಾರು ಒಂದು ವರ್ಷದ ನಂತರ ಮತ್ತೊಮ್ಮೆ ಈಗ ಅವರಿಗೆ ಜೀವ ಬೆದರಿಕೆ ಬಂದಿದೆ.
ಈ ಬಾರಿ, ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾದ ಸಂದೇಶದ ಮೂಲಕ ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಅವರನ್ನು ಕೊಲ್ಲುವುದಾಗಿ ಮತ್ತು ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬೆದರಿಕೆಯ ಮೂಲ ಮತ್ತು ಸತ್ಯಾಸತ್ಯತೆಯ ಬಗ್ಗೆ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ನಟನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ನೇರ ಮತ್ತು ಪರೋಕ್ಷವಾಗಿ ಹಲವಾರು ಬೆದರಿಕೆಗಳು ಬಂದಿವೆ. 1998 ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಗ್ಯಾಂಗ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಾಗಿದೆ, ಏಕೆಂದರೆ ಈ ಪ್ರಾಣಿ ಬಿಷ್ಣೋಯ್ ಸಮುದಾಯಕ್ಕೆ ಧಾರ್ಮಿಕ ಮಹತ್ವದ್ದಾಗಿದೆ.
2024 ರಲ್ಲಿ, ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಹೊಸ ಬೆದರಿಕೆ ಬಂದಿತು, ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಕೃಷ್ಣಮೃಗ ಹತ್ಯೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ಪಾವತಿಸಬೇಕು ಎಂದು ಒತ್ತಾಯಿಸಿದರು. ಅಕ್ಟೋಬರ್ 30 ರಂದು, ನಟನಿಗೆ ಮತ್ತೆ ಅಪರಿಚಿತ ವ್ಯಕ್ತಿಯೊಬ್ಬ 2 ಕೋಟಿ ರೂ. ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದನು.
2024ರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತಿನ ಚೀಟಿ ಬಳಸಿ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ಗೆ ಎಂಟ್ರಿಯಾಗಲು ಪ್ರಯತ್ನಿಸಿದರು. 2022ರಲ್ಲಿ ಬೆದರಿಕೆ ಹಾಕುವ ಪತ್ರವು ಅವರ ನಿವಾಸದ ಬಳಿಯ ಬೆಂಚ್‌ನಲ್ಲಿ ಕಂಡುಬಂದಿತು.
ಈ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಖಾನ್ ಸುತ್ತಮುತ್ತಲಿನ ಭದ್ರತೆಯನ್ನು ಈ ಹಿಂದೆ ಹಲವು ಬಾರಿ ಬಿಗಿಗೊಳಿಸಲಾಗಿದೆ.