ಬೆಂಗಳೂರು: ಭ್ರಷ್ಟಾಚಾರಮುಕ್ತ, ಪಾರದರ್ಶಕ ಆಡಳಿತದ ಭರವಸೆ ನೀಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಿಲುವು ಬದಲಾಯಿಸಿದೆ. ಹಗರಣಗಳನ್ನು ಮುಚ್ಚಿಕೊಳ್ಳಲು ಆರ್‌ಟಿಐ ಕಾರ್ಯಕರ್ತರಲ್ಲಿ ಭೀತಿ ಸೃಷ್ಟಿಸಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ಬಿಜೆಪಿ ಕಾನೂನು ಪ್ರಕೋಷ್ಠದ ವಿವೇಕ್ ರೆಡ್ಡಿ ಆರೋಪಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಮಾಹಿತಿ ಒದಗಿಸಲು ಎಲ್ಲ ಇಲಾಖೆಗಳಿಗೆ ಸೂಚಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚಿಸಿರುವ ಔಚಿತ್ಯವೇನು ? ಎಂದು ಪ್ರಶ್ನಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಿಎಂ ಸಿದ್ದರಾಮಯ್ಯ ಸುಪರ್ದಿಯಲ್ಲಿದೆ. ಇಂತಹ ಸೂಚನೆ ಹೊರಡಿಸಿರುವುದು ಕಳವಳಕಾರಿಯಾಗಿದೆ. ಸರ್ಕಾರ ಪಾರದರ್ಶಕವಾಗಿದ್ದರೆ ಆರ್‌ಟಿಐ ಅರ್ಜಿಗಳಿಗೆ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ಭ್ರಷ್ಟಾಚಾರ, ಹಗರಣಗಳನ್ನು ಹೊರಬರದಂತೆ ನೋಡಿಕೊಳ್ಳಲು, ರಕ್ಷಣೆ ಪಡೆಯಲು ಈ ಹಿಂದೆ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದರು. ಹೈಕೋರ್ಟ್ ಮಧ್ಯೆ ಪ್ರವೇಶದಿಂದ ಲೋಕಾಯುಕ್ತ ಮತ್ತೆ ಕಾರ್ಯಾರಂಭಿಸಿದ್ದು, ಬಲವರ್ಧನೆಗೆ ಅವಕಾಶ ಕಲ್ಪಿಸಿದೆ.
ಲೋಕಾಯುಕ್ತ ಸಂಸ್ಥೆಯನ್ನು ಮತ್ತೆ ಮುಚ್ಚುವುದು ಸಾಧ್ಯವಿಲ್ಲವೆಂದು ತಿಳಿದು, ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವವರ ಮೇಲೆ ಪ್ರಹಾರ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ವಿವೇಕ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಹಕ್ಕು ಕಾಯ್ದೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶವಿಲ್ಲ. ಕಾನೂನು ವಿರೋಧಿ ನಡೆಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸಿದೆ ಎಂದು ದೂರಿದರು.
ಆರ್‌ಟಿಐ ಅರ್ಜಿದಾರರು, ಹೋರಾಟಗಾರರಿಗೆ ಸರ್ಕಾರ ಒತ್ತಾಸೆ ನೀಡಬೇಕು. ಅರ್ಜಿದಾರರ ಗೌಪ್ಯತೆ ಕಾಯ್ದುಕೊಳ್ಳುವ ಜತೆಗೆ ನಿಯಮದ ಪ್ರಕಾರ ಕೇಳಿದ ಮಾಹಿತಿಯನ್ನು ಒದಗಿಸಲು ಕಾಯ್ದೆ ಸ್ಪಷ್ಟವಾಗಿ ಸೂಚಿಸಿದೆ.
ಮಾಹಿತಿ ಹಂಚಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಸುತ್ತೋಲೆಯಿಂದ ಸ್ಪಷ್ಟವಾಗಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕವಾದ ಆಡಳಿತ ನಡೆಸುವವರು ಭಯಪಡುವ ಅಗತ್ಯವಿಲ್ಲ ಎಂದು ವಿವೇಕ್ ರೆಡ್ಡಿ ಕಾಲೆಳೆದರು.