ವೇಷಭೂಷಣಗಳಲ್ಲಿ ಮಿಂಚಿದ ಮಕ್ಕಳು 
ನ್ಯೂಸ್

ಸಹಸ್ರಾರು ಭಕ್ತರಿಂದ ಅನ್ನಪ್ರಸಾದ ಸ್ವೀಕಾರ

ಬಾಗಲಕೋಟೆ: ಪರಿವರ್ತನೆ ಶಿಕ್ಷಣದ ಮೂಲ ಗುಣ. ಶೈಕ್ಷಣಿಕವಾಗಿ ಜೀವ ಮತ್ತು ಜೀವನಕ್ಕೆ ಬೆಳಕು ನೀಡುವ ಸೇವೆಯನ್ನು ಮಾಡಿಕೊಂಡು ಬಂದ ಇತಿಹಾಸ ನಮ್ಮ ಮಠಗಳಿಗಿದೆ. ಬೀಳೂರು ಶ್ರೀಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದು ಐತಿಹಾಸಿಕ ದಾಖಲೆಯಾಗಿ ಬೆಳವಣಿಗೆ ಕಂಡಿರುವುದು ಬಾಗಲಕೋಟೆಯ ಹೆಮ್ಮೆ ಎಂದು ಚರಂತಿಮಠದ ಪ್ರಭುಸ್ವಾಮಿಗಳು ಹೇಳಿದರು.
ನಗರದ ಬಿ.ವಿ.ವಿ. ಸಂಘದ ಸಂಸ್ಥಾಪಕರಾದ ಬೀಳೂರು ಗುರುಬಸವ ಮಹಾಸ್ವಾಮಿಗಳ ಶ್ರಾವಣ ಮಾಸದ ಉತ್ಸವದ ನಿಮಿತ್ತ ಶನಿವಾರ ನೂತನ ಸಭಾಂಗಣದಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಬೀಳೂರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದವರು. ಅಕ್ಷರ ಜ್ಞಾನವನ್ನು ಮುಂದಿನ ಪೀಳಿಗೆಗೆ ಬಿತ್ತಿದರೆ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬುದನ್ನು ಬೀಳೂರು ಶ್ರೀಗಳು ಅರಿತಿದ್ದರು. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ಬಿತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಜನರು ನಿರಂತರವಾಗಿ ಪರಿವರ್ತನೆಯಾಗುತ್ತಿರಬೇಕು. ಅದುವೇ ಶಿಕ್ಷಣ. ಉತ್ತರ ಕರ್ನಾಟಕದ ಮಠ-ಮಾನ್ಯಗಳಿಂದ ಅಕ್ಷರದಾಸೋಹ ಹಾಗೂ ಅನ್ನದಾಸೋಹ ನಡೆದ ಪರಿಣಾಮ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕ್ಷೇತ್ರಗಳ ಮೂಲಕ ಬಿ.ವಿ.ವಿ. ಸಂಘ ಇಂದು ದೇಶವ್ಯಾಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಉಪನ್ಯಾಸ ನೀಡಿದ ಸಿಂದಗಿ ಸಾರಂಗ-ಗಚ್ಚಿನಮಠದ ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಅಕ್ಷರ ಹಾಗೂ ಜ್ಞಾನದ ಕೊರತೆ ಇದ್ದ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು ಬೀಳೂರು ಅಜ್ಜನವರು. ಸಿಂದಗಿಯಲ್ಲಿ ಅವರನ್ನು ಸಾಕ್ಷಾತ್ ಗುರುವಿನಂತೆ ಕಾಣುತ್ತಾರೆ. ಗುರುಗಳ ಮೇಲಿನ ಅಪಾರ ಭಕ್ತಿ, ಸೇವಾ ಮನೋಧರ್ಮ ಹಾಗೂ ಪ್ರಾಮಾಣಿಕ ಶಿಷ್ಯತ್ವ ಅವರನ್ನು ಶ್ರೇಷ್ಠರನ್ನಾಗಿಸಿತು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವಂತೆ ಬೀಳೂರು ಅಜ್ಜನವರ ವ್ಯಕ್ತಿತ್ವ ಇತ್ತು ಎಂದ ಅವರು ವ್ಯಕ್ತಿಯ ಸಾಧನೆಯಿಂದ ಹುದ್ದೆಗಳು ಹುಡುಕಿ ಬರುತ್ತವೆ. ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದ ಬೀಳೂರು ಅಜ್ಜನವರು ನೆಟ್ಟ ಅಕ್ಷರದ ಸಸಿ ಇಂದು ಬೃಹತ್ ವೃಕ್ಷವಾಗಿ ಬೆಳೆದಿದೆ. ಆದರೆ ಅಂಕಗಳಿAದ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ. ತಂದೆ-ತಾಯಿಯರೊAದಿಗೆ ಮಹಾತ್ಮರ ಸ್ಮರಣೆಯನ್ನೂ ಮಾಡುವಂತಹ ಶಿಕ್ಷಣ ನಮಗೆ ಬೇಕಿದೆ ಎಂದರು.
ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಬೀಳೂರು ಅಜ್ಜನವರು ಅತ್ಯಂತ ಕ್ರಿಯಾಶೀಲರಾಗಿದ್ದರು. ಅವರು ಬಾಗಲಕೋಟೆಗೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಯಿತು. ಬಾಗಲಕೋಟೆಯೊಂದಿಗೆ ಅವಿನಾಭಾವ ಸಂಬAಧ ಹೊಂದಿದ್ದ ಅವರು ಸಮಾಜೋದ್ಧಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಿಲ್ವಪತ್ರಿಯಂತೆ ಬೀಳೂರು ಗುರುಬಸವ ಮಹಾಸ್ವಾಮಿಗಳು, ಅಥಣಿ ಶಿವಯೋಗಿಗಳು ಹಾಗೂ ಬಿದರಿಯ ಕುಮಾರಸ್ವಾಮಿಗಳು ಸಮಾಜೋದ್ಧಾರಕ ಕೆಲಸಗಳನ್ನು ಮಾಡಿದ್ದಾರೆ. ಅಜ್ಜನವರ ಆಶೀರ್ವಾದ ಹಾಗೂ ಕಾರ್ಯಾದ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರ ಸೇವಾ ಕಾರ್ಯದೊಂದಿಗೆ ಇಂದು ಬಿ.ವಿ.ವಿ. ಸಂಘದಲ್ಲಿ ೧೯೦ ಸಂಸ್ಥೆಗಳು ಬೆಳವಣಿಗೆ ಕಂಡಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ವಹಿಸಿದ್ದರು. ಸಂಘದ ಆಡಳಿತಾಧಿಕಾರಿಗಳಾದ ವಿ.ಆರ್. ಶಿರೂಳ ಹಾಗೂ ಡಾ. ವಿಜಯಕುಮಾರ ಕಟ್ಟಗಿಹಳ್ಳಿಮಠ, ಉತ್ಸವ ಸಮಿತಿ ಅದ್ಯಕ್ಷರಾದ ಬಿ.ಆರ್.ಬೊಳಿಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ಪಿ.ಎನ್. ಸಿಂಪಿ, ಪ್ರಾಚಾರ್ಯರಾದ ಡಾ. ಜಗನ್ನಾಥ ಚವ್ಹಾಣ, ಎಸ್.ಆರ್. ಮೂಗನೂರಮಠ, ಡಾ. ಅರುಣ ಹೂಲಿ, ಪಂಡಿತ ಅರಬ್ಬಿ ಸೇರಿದಂತೆ ಸಂಘದ ಸದಸ್ಯರು, ಕಾಲೆಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷರುಗಳು, ವಿವಿಧ ಮಹಾವಿದ್ಯಾಲಯಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.