ಸಾಗರ: ನಗರದ ಸೌಂದರ್ಯ ಹೆಚ್ಚಿಸಲು, ಸುಂದರ ಮತ್ತು ಸ್ವಚ್ಛ ಸಾಗರ ನಿರ್ಮಾಣಕ್ಕೆ ಅಗತ್ಯ ಯೋಜನೆಯನ್ನು ನಗರಸಭೆ ರೂಪಿಸಲಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಸಾಗರ ಪುರಭವನದಲ್ಲಿ ಮಂಗಳವಾರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರು, ಸಾರ್ವಜನಿಕರು ನೀಡಿರುವ ಸಲಹೆಯನ್ನು ಬಜೆಟ್‌ನಲ್ಲಿ ಪರಿಗಣಿಸಲಾಗುತ್ತದೆ ಎಂದರು.
ಪ್ರಮುಖವಾಗಿ ನಲ್ಲಿ ಸಂಪರ್ಕ ತೆರಿಗೆ ವಸೂಲಿ, ಉದ್ಯಾನ ನಿರ್ವಹಣೆ, ್ಲೆಕ್ಸ್ ಅಳವಡಿಕೆ ಮಾರ್ಗಸೂಚಿ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಬಜೆಟ್ ತಯಾರಿಸಲಾಗುತ್ತದೆ. ನಗರಸಭೆ ಮೂಲಕ ನಗರದ ಜನರಿಗೆ ಉತ್ತಮ ಆಡಳಿತ ನೀಡಲು ಎಲ್ಲರ ಸಹಕಾರ ಮುಖ್ಯ. ಊರಿನ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಸದಸ್ಯೆ ಭಾವನಾ ಸಂತೋಷ್ ಮಾತನಾಡಿ, ನಗರದ ಮಧ್ಯೆ ಮತ್ತು ಸುತ್ತಮುತ್ತ ಸಾಕಷ್ಟು ಉದ್ಯಾನಗಳಿವೆ. ಕೆಲವೆಡೆ ಕಾಮಗಾರಿ ಅಗತ್ಯವಿದೆ. ಈ ಬಗ್ಗೆ ಬಜೆಟ್‌ನಲ್ಲಿ ಗಮನಹರಿಸಬೇಕು ಎಂದರು.
ಪ್ರೇಮಾ ಕಿರಣ್ ಸಿಂಗ್ ಮಾತನಾಡಿ, ಜನರಿಗೆ ಮನೆ ಮತ್ತು ನಳ ತೆರಿಗೆ ಪಾವತಿ, ಮುಖ್ಯವಾಗಿ ನೀರನ್ನು ಮಿತವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು. ಸದಸ್ಯ ಶ್ರೀರಾಮ್, ನಗರದ ನಾಲ್ಕೂ ದಿಕ್ಕುಗಳಲ್ಲಿ ಬೃಹತ್ ಜಾಹೀರಾತು ಲಕ ಅಳವಡಿಸಿ ಮತ್ತು ಶುದ್ಧ ಕುಡಿಯುವ ನೀರಿನ ಕೇಂದ್ರ ಪ್ರಾರಂಭಿಸಲು ಸಲಹೆ ನೀಡಿದರು.
ಉಪಾಧ್ಯಕ್ಷೆ ಸವಿತಾ ವಾಸು, ಬಿ.ಎಚ್.ಲಿಂಗರಾಜ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ವ್ಯವಸ್ಥಾಪಕ ಬಾಲಚಂದ್ರ ಇತರರಿದ್ದರು.