ಹುಬ್ಬಳ್ಳಿ : ಗೋವಾದಲ್ಲಿನ ಜೈನ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು.
ಇಲ್ಲಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಭಗವಾನ ಶ್ರೀ ಮುನಿಸುವ್ರತ ತೀರ್ಥಂಕರರಿಗೆ ಸಾಂಕೇತಿಕ ಅಭಿಷೇಕ ಮಾಡಿದ ನಂತರ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿನ ತೀರ್ಥಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತಿವೆ. ಜೈನ ತೀರ್ಥಕ್ಷೇತ್ರಗಳು ಸೇರಿ ಎಲ್ಲ ಸನಾತನ ಧರ್ಮದ ಕ್ಷೇತ್ರಗಳ ಅಭಿವೃದ್ಧಿಗೆ ಗೋವಾ ಸರ್ಕಾರವು ಸಹ ಕೈಗೂಡಿಸಿದೆ. ಕಳೆದ 10 ವರ್ಷಗಳಲ್ಲಿ ಕೇದಾರನಾಥ, ಸೋಮನಾಥ ಸೇರಿ ಅನೇಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿವೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ವಣಗೊಂಡಿದೆ ಎಂದರು.
ಇಂದಿನ ಯುವಕರಿಗೆ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸಬೇಕಿದೆ. ವಿಕಸಿತ ಭಾರತ-2047ರ ಕನಸು ನನಸಾಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯುವಶಕ್ತಿ, ನಾರಿಶಕ್ತಿಗೆ ಉತ್ತೇಜನ ನೀಡುತ್ತಿದ್ದಾರೆ. ಬಡವರ ಕಲ್ಯಾಣದ ಜತೆಗೆ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ವರೂರು ನವಗ್ರಹ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಹ ಇದೇ ಉದ್ದೇಶವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಗೋವಾಕ್ಕೆ ಆಗಮಿಸಿ, ಧರ್ಮ ಪ್ರಚಾರ ನಡೆಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಪ್ರಮೋದ ಸಾವಂತ ಅವರು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರನ್ನು ಆಹ್ವಾನಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಜೈನ ಸಮಾಜ ಅಭಿವೃದ್ಧಿ ನಿಗಮ-ಮಂಡಳಿ ರಚನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಭರವಸೆ ಈಡೇರದೇ ಇದ್ದರೆ, ಮುಂದಿನ ಮೂರು ವರ್ಷಗಳ ನಂತರ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಸಮಯದಲ್ಲಿ ಖಂಡಿತವಾಗಿಯೂ ಜೈನ ನಿಗಮ-ಮಂಡಳಿ ರಚಿಸುವುದಾಗಿ ಆಶ್ವಾಸನೆ ನೀಡಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಕೇವಲ ಒಂದು ಧರ್ಮಕ್ಕೆ ಸೀಮಿತಗೊಂಡಿಲ್ಲ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿದರು.
ಆಶೀರ್ವಚನ ನೀಡಿದ ರಾಷ್ಟ್ರಸಂತ, ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜ, ಅತ್ತಾದರೂ ಸರಿ, ಸತ್ತಾದರೂ ಸರಿ, ಜೈನ ನಿಗಮ-ಮಂಡಳಿ ಪಡೆದೇ ತೀರುತ್ತೇನೆ. ಇದು ನಮ್ಮ ಹಕ್ಕು. ಮೂರು ತಿಂಗಳಲ್ಲಿ ನಿಗಮ-ಮಂಡಳಿ ರಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಭರವಸೆ ಈಡೇರದೇ ಇದ್ದರೆ ವಿಧಾನಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳುವುದು ಖಚಿತ ಎಂದರು.
ವಿವಿಧ ಭಟ್ಟಾರಕರ ನೇತೃತ್ವದಲ್ಲಿ ಜೂ. 8ರಂದು ಐನಾಪುರದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಹೋರಾಟದ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೋವಾದಲ್ಲಿ ಜೈನ ಮಂದಿರಕ್ಕಾಗಿ 5 ಎಕರೆ ಜಮೀನು ನೀಡಲು ಮುಂದಾದ ಗೋವಾ ಮುಖ್ಯಮಂತ್ರಿಗೆ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಮಹೇಂದ್ರ ಸಿಂಘಿ, ವಿದ್ಯಾಧರ ಪಾಟೀಲ ಹಾಗೂ ಇತರರು ಇದ್ದರು.