ನ್ಯೂಸ್

ಮದುವೆಗೆ ಹೋದವರನ್ನು ಮಸಣಕ್ಕೆ ಕರೆದೊಯ್ದ ಜವರಾಯ !

ಹನೂರು: ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ವಾಪಾಸ್​ ಆಗುತ್ತಿದ್ದ ವೇಳೆ ಗೂಡ್ಸ್ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ದರ್ಮರಣಕ್ಕೀಡಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಹುಣಸೇಪಾಳ್ಯ ಗ್ರಾಮದ ನಾಗರಾಜು (60), ನಂಜುಂಡಯ್ಯ (60), ಚಿಕ್ಕಸಿದ್ದಮ್ಮ (55) ಮೃತರು. ಗಾಯಾಳುಗಳನ್ನು ಪಿ.ಜಿ ಪಾಳ್ಯ ಹಾಗೂ ಒಡೆಯರಪಾಳ್ಯ ಸರ್ಕಾರಿ ಆಸ್ಪತೆಗೆ ದಾಖಲು ಮಾಡಲಾಗಿದೆ.

ಹುಣಸೇಪಾಳ್ಯದ ಯುವಕನ ಜತೆ ವಧುವಿನ ಸ್ವಗ್ರಾಮ ಮಧುವನಹಳ್ಳಿಯಲ್ಲಿ ಇಂದು(ಸೋಮವಾರ) ಬೆಳಗ್ಗೆ ಮದುವೆ ಕಾರ್ಯಕ್ರಮವಿತ್ತು. ಹುಣಸೇಪಾಳ್ಯದ ಗ್ರಾಮಸ್ಥರು ಮದುವೆ ಮುಗಿಸಿಕೊಂಡು ಮಧ್ಯಾಹ್ನ ಸ್ವಗ್ರಾಮಕ್ಕೆ ಗೂಡ್ಸ್​ ವಾಹನದಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ತಾಲೂಕಿನ ಕೊರಮನ ಕತ್ತರಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.