ಶಿವಮೊಗ್ಗ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿ ನಟ ದರ್ಶನ್ ಹಾಗೂ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಮುಖರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡು ಚಿತ್ರಹಿಂಸೆ ನೀಡಿ, ಮಾರಣಾಂತಿಕ ಹಲ್ಲೆ ನಡೆಸಿ ಸಾಯಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಇದೊಂದು ರಾಕ್ಷಸಿ ಪ್ರವೃತ್ತಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಲನಚಿತ್ರದ ಮೂಲಕ ನೀತಿಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಇಂತಹ ಗೋಮುಖ ವ್ಯಾಘ್ರ ನಡವಳಿಕೆಯ ನಟ ಮಾಡಿರುವ ಕೃತ್ಯಕ್ಕೆ ಕ್ಷಮೆಯಿಲ್ಲ. ದರ್ಶನ್ ಜತೆ ಈ ಕೃತ್ಯದಲ್ಲಿ ಕೈಜೋಡಿಸಿದ ಎಲ್ಲರೂ ಶಿಕ್ಷಗೆ ಅರ್ಹರಾಗಿದ್ದಾರೆ. ಇವರೆಲ್ಲರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮನಾಥ, ಉಪಾಧ್ಯಕ್ಷ ಟಿ.ಬಿ.ಸೋಮಶೇಖರಯ್ಯ, ಸುಜಯಾ ಪ್ರಸಾದ್, ಖಜಾಂಚಿ ಉಮೇಶ್ ಹಿರೇಮಠ, ಪರಮೇಶ್ವರಯ್ಯ, ಟಿ.ಬಿ.ಮಲ್ಲಿಕಾರ್ಜುನಯ್ಯ, ವೀರಸಂಗಯ್ಯ, ರಶ್ಮಿ, ಆರತಿ, ಉಮಾದೇವಿ ಇತರರಿದ್ದರು.