ನ್ಯೂಸ್

ರೇಖಾ ಕದಿರೇಶ್ ಕೊಂದವರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕಾಟನ್‌ಪೇಟೆಯ ಪೀಟರ್ (46), ಸೂರ್ಯ ಅಲಿಯಾಸ್ ಸೂರಜ್ (20), ಸ್ಟೀನ್ (21), ಪುರುಷೋತ್ತಮ್ (22), ಅಜಯ್ (21), ಅರುಣ್‌ಕುಮಾರ್ (36) ಮತ್ತು ಸೆಲ್ವರಾಜ್ ಅಲಿಯಾಸ್ ಬುದಾನ್ (36) ಶಿಕ್ಷೆಗೆ ಒಳಗಾದ ಅಪರಾಧಿಗಳು. ರೇಖಾ ಕದಿರೇಶ್ ಅತ್ತಿಗೆ ಮಾಲಾ ಮೃತಪಟ್ಟಿದ್ದಾರೆ.

ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಕದಿರೇಶ್, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ 2021ರ ಜೂನ್ 24ರ ಬೆಳಗ್ಗೆ 10 ಗಂಟೆಯಲ್ಲಿ ಪಕ್ಷದ ಕಚೇರಿ ಬಳಿ ಇಸ್ಕಾನ್‌ನಿಂದ ಬಂದಿದ್ದ ಊಟವನ್ನು ಹಂಚುತ್ತಿದ್ದರು. ಹಣಕಾಸಿನ ವಿಚಾರಕ್ಕೆ ರೇಖಾ ಅವರ ಅತ್ತಿಗೆ ಮಾಲಾ, ಸೆಲ್ವರಾಜ್ ಸುಾರಿ ನೀಡಿದ್ದ ಹಿನ್ನೆಲೆಯಲ್ಲಿ ಇತರ ಅಪರಾಧಿಗಳು ಬಂದು ಏಕಾಏಕಿ ರೇಖಾ ಕದಿರೇಶ್ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿದ್ದರು. 2018ರಲ್ಲಿ ಕದಿರೇಶ್ ಕೊಲೆ ಸಹ ನಡೆದಿತ್ತು. ಹಾಡಹಗಲೇ ನಡೆದ ಕೃತ್ಯದಿಂದ ಛಲವಾಧಿಪಾಳ್ಯ ವಾರ್ಡ್ ಜನರೇ ಬೆಚ್ಚಿಬಿದ್ದಿತ್ತು.

ಕಾಟನ್‌ಪೇಟೆ ಠಾಣೆ ಅಂದಿನ ಇನ್‌ಸ್ಪೆಕ್ಟರ್ ಚಿದಾನಂದಮೂರ್ತಿ, ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್ ಅವರು ಮಂಗಳವಾರ ಶಿಕ್ಷೆ ಪ್ರಕಟಿಸಿದ್ದಾರೆ.

ಸಾಕ್ಷಿದಾರರಿಗೂ ಹೆದರಿಕೆ :

ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಪೊಲೀಸ್ ತನಿಖೆ, ಹೇಳಿಕೆ ಮತ್ತು ಹತ್ಯೆ ಕೃತ್ಯದ ವಿಡಿಯೋ ಇಟ್ಟುಕೊಂಡು ಪಬ್ಲಿಕ್ ಪ್ರಾಸಿಕ್ಯೂಟರ್ ಸತ್ಯವತಿ ಅವರು ಬಲವಾಗಿ ವಾದ ಮಂಡಿಸಿದರು. ಉಳಿದಂತೆ ಅಪರಾಧಿಗಳ ಭಯದಲ್ಲಿ ರೇಖಾ ಕದಿರೇಶ್ ದಂಪತಿಯ ಮಕ್ಕಳು ಸೇರಿ ಯಾವುದೇ ಒಬ್ಬ ಸಾಕ್ಷಿದಾರರು ಸಹ ಕೋರ್ಟ್‌ನಲ್ಲಿ ಸಾಕ್ಷಿ ನುಡಿಯಲು ಧೈರ್ಯ ಮಾಡಲಿಲ್ಲ ಎನ್ನಲಾಗಿದೆ.