ನ್ಯೂಸ್

ಭಗವಂತನ ಅಂಶವುಳ್ಳವರು ಕಲಾವಿದರಾಗುತ್ತಾರೆ

ಮೈಸೂರು: ಜಗತ್ತಿನ ಮೊದಲ ಕಲಾವಿದ ಭಗವಂತ. ಭಗವಂತನ ಅಂಶ ಉಳ್ಳವರು ಮಾತ್ರ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಸಂಸ್ಕೃತ ವಿದ್ವಾನ್ ಡಾ.ಎಚ್.ವಿ.ನಾಗರಾಜರಾವ್ ಹೇಳಿದರು.

ಮೈಸೂರು ಆರ್ಟ್ ಗ್ಯಾಲಿ ವತಿಯಿಂದ ಕಲಾಮಂದಿರದ ಆವರಣದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ಡಾ.ಜಮುನಾರಾಣಿ ವಿ.ಮಿರ್ಲೆ ಅವರು ರಚಿಸಿರುವ ಕಲಾಕೃತಿಗಳ ಪ್ರದರ್ಶನ ಹಾಗೂ ಸಾಧ್ಯಸಿದ್ಧಿ ಮತ್ತು ಜೀವನಯಾನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂಗೀತ ಜ್ಞಾನದ ಅನುಭವವನ್ನು ಬಳಸಿಕೊಂಡು ರಾಗಗಳ ಚಿತ್ರ ಬಿಡಿಸಿದ್ದಾರೆ. ಇದು ಅವರಿಗೆ ಭಗವಂತ ಕೊಟ್ಟಿರುವ ಶಕ್ತಿಯಾಗಿದೆ. ಜಮುನಾ ಅವರು ಕಾಲೇಜಿನಲ್ಲಿ ಇದ್ದಾಗ ಷೇಕ್ಸ್‌ಪಿಯರ್ ಮ್ಯಾಕ್‌ಬೇತ್ ನಾಟಕವನ್ನು ಅಭಿನಯಿಸಿದ್ದಾರೆ. ಸಂಗೀತ ಎಂಬುದೇ ದೊಡ್ಡ ಪ್ರಪಂಚ. ಅದಕ್ಕೆ ಹೆಚ್ಚಿನ ಗಮನ ನೀಡಬೇಕು. ಆದರೆ ಸಂಗೀತವನ್ನು ಪೂರ್ಣಗೊಳಿಸಿದ್ದಾರೆ. ನೃತ್ಯದಲ್ಲಿ ಪ್ರವೀಣ್ಯತೆ ಪಡೆದುಕೊಂಡು ಹೀಗೆ ಎಲ್ಲ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.

ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಆರ್.ಜಿ.ಸಿಂಗ್, ಮೈಸೂರು ವಿವಿ ಸಂದರ್ಶಕ ಪ್ರಾಧ್ಯಪಕ ಡಾ.ಸಿ.ನಾಗಣ್ಣ, ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕ ಎಲ್.ಶಿವಲಿಂಗಪ್ಪ, ಲೇಖಕಿ ಬಿ.ಆರ್.ನಾಗರತ್ನಾ, ಕಲಾವಿದೆ ಡಾ.ಜಮುನಾರಾಣಿ ಮುರ್ಲೆ ಇತರರಿದ್ದರು.