ನ್ಯೂಸ್

ಹೃದಯದ ಸಮಸ್ಯೆ ಹೊಂದಿರುವವರು ಕರೊನಾ ವಿರುದ್ಧ ಕಟ್ಟೆಚ್ಚರ ವಹಿಸಲು ಈ ಮಾರ್ಗಗಳನ್ನು ಅನುಸರಿಸಿ

ಕರೊನಾ ವೈರಸ್ ಜಗತ್ತಿನಾದ್ಯಂತ ಹರಡಿ ಭಾರತಕ್ಕೂ ಕಾಲಿಟ್ಟು ಈಗ ಮೂರನೇ ಹಂತದಲ್ಲಿದೆ. ಇದು ಅಪಾಯವನ್ನು ಸಾರಿ ಹೇಳುತ್ತಿದೆ. ಸಾಮಾನ್ಯ ರೀತಿಯ ಎಲ್ಲ ಕಾಳಜಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಜತೆಗೆ ‘ಮನೆಯಲ್ಲೇ ಇರುವುದು’ ಪಾಲಿಸಬೇಕು. ಭಾರತ ಲಾಕ್​ಡೌನ್ ಎಂಬ ಸರ್ಕಾರದ ಆದೇಶವನ್ನು ಮನದಟ್ಟು ಮಾಡಿಕೊಂಡು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ನಮ್ಮನ್ನು ನಾವು ಕರೊನಾ ಎಂಬ ಹೆಮ್ಮಾರಿಯಿಂದ ರಕ್ಷಿಸಿಕೊಳ್ಳಬಹುದು.

ಮುಖ್ಯವಾಗಿ ಈ ಕೋವಿಡ್-19 ಪುಪ್ಪುಸಗಳನ್ನು ಹಾನಿಗೊಳಿಸುತ್ತವೆ. ಅಂದರೆ ಉಸಿರಾಟಕ್ಕೇ ಭಂಗ ಉಂಟುಮಾಡುತ್ತದೆ. ಅದೇ ರೀತಿ ಕೆಲವರಲ್ಲಿ ಹೃದಯ ಕೂಡ ಹಾನಿಗೊಳಗಾಗಬಹುದು. ಅದರಲ್ಲೂ ಈ ಕೆಳಗಿನ ಸಮಸ್ಯೆಗಳಿರುವವರು ಅತೀ ಹೆಚ್ಚಿನ ಕಾಳಜಿಯಿಂದಿರಬೇಕು ಎಂದು ತಿಳಿಸಿದೆ ಅಮೆರಿಕನ್ ಕಾರ್ಡಿಯಾಲಜಿ ಕಾಲೇಜ್.

#  ಹೃದಯ ಕಸಿ ಮಾಡಿಸಿಕೊಂಡವರು ಅಂದರೆ ಹಾರ್ಟ್ ಟ್ರಾನ್ಸ್​ಪ್ಲಾಂಟೇಶನ್​ಗೆ ಒಳಗಾದವರು ಸಾಕಷ್ಟು ಎಚ್ಚರದಿಂದಿರಬೇಕು. ವೈದ್ಯರ ಪ್ರತಿಯೊಂದು ಸಲಹೆಯನ್ನೂ ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕರೊನಾ ಬಾರದಂತೆ ನೋಡಿಕೊಳ್ಳುವ ವೈಯಕ್ತಿಕ ಅಂತರ, ಶುಚಿತ್ವಕ್ಕೆ ವಿಶೇಷ ಮಹತ್ವ ನೀಡಬೇಕು.

# ಹುಟ್ಟಿನಿಂದ ಹೃದಯದ ಸಮಸ್ಯೆ ಹೊಂದಿರುವವರು ಅಥವಾ ನಂತರದಲ್ಲಿ ಯಾವುದಾದರೂ ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಸುರಿಯರು ಜಾಗ್ರತೆಯಿಂದಿರುವುದು ಒಳಿತು. ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಪಾಡಿಕೊಳ್ಳಲು ಸೂಕ್ತ ಚಟುವಟಿಕೆಗೆ ಆದ್ಯತೆ ನೀಡಬೇಕು.

# ಹೃದಯದ ಬೈಪಾಸ್ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಪಟ್ಟವರು ಈ ವೈರಸ್ ತಗುಲದಂತೆ ನೋಡಿಕೊಳ್ಳಬೇಕು. ಕರೊನಾ ವೈರಸ್ ತಗುಲಿದರೆ ಆರಂಭದಲ್ಲಿ ಗೊತ್ತೇ ಆಗದ ಕಾರಣದಿಂದ ಬಹಳ ಎಚ್ಚರಿಕೆ ವಹಿಸಬೇಕು.

# ಹೃದಯಬಡಿತ ಏರುಪೇರಾಗುವವರು (ಇರ್ರೆಗ್ಯುಲರ್ ಹಾರ್ಟ್​ಬೀಟ್) ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಿರಿ. ಎಲ್ಲರಿಂದಲೂ ಅಂತರ ಕಾಪಾಡಿಕೊಳ್ಳುವ ಮತ್ತು ಇತರ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ.

ಹೃದಯಸಂಬಂಧಿತ ಯಾವುದೇ ಕಾಯಿಲೆ ಹೊಂದಿರುವ ಅಥವಾ ಸಮಸ್ಯೆಗಳಿರುವವರು ತಾವು ನಿಯತವಾಗಿ ತೆಗೆದುಕೊಳ್ಳುವ ಯಾವುದೇ ಔಷಧಗಳನ್ನು ಬಿಡಬಾರದು. ವೈದ್ಯರು ಸೂಚಿಸಿದ ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳಬೇಕು. ಅಗತ್ಯವೆನಿಸಿದರೆ ಹೃದಯತಜ್ಞರನ್ನು ಸಂರ್ಪಸಿ ಸಲಹೆ ಪಡೆದುಕೊಳ್ಳಬೇಕು.

ಆಗಾಗ ಸೋಪ್ ಹಾಗೂ ನೀರಿನಿಂದ ಕೈಗಳನ್ನು ತೊಳೆಯುತ್ತಿರಬೇಕು. ಸೋಪು ಹಾಕಿ ಕನಿಷ್ಠ 20 ಸೆಕೆಂಡ್​ಗಳ ಕಾಲ ಕೈಗಳನ್ನು ಚೆನ್ನಾಗಿ ತಿಕ್ಕಿ, ಬೆರಳುಗಳ ಮಧ್ಯೆಯೂ ಸ್ವಚ್ಛವಾಗುವಂತೆ ತೊಳೆದುಕೊಳ್ಳಬೇಕು. ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂ ಪೇಪರ್ ಅಥವಾ ಮೊಣಕೈ ಬಳಸಬೇಕು. ಇದರಿಂದ, ವೈರಾಣುಗಳು ಇನ್ನೊಬ್ಬರಿಗೆ ಹರಡುವುದನ್ನು, ಬೇರೆ ವಸ್ತುವಿಗೆ ತಗಲುವುದನ್ನು ತಪ್ಪಿಸಲು ಸಾಧ್ಯ.

ಇವೆಲ್ಲದರ ಜತೆಗೆ, ಮುಖ್ಯವಾಗಿ ಸರ್ಕಾರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ.

ನೀವೂ ಪ್ರಶ್ನೆ ಕೇಳಿ

ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ಸಂಪಾದಕರು, ಧನ್ವಂತರಿ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ.24, ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 18