ನ್ಯೂಸ್

ವಿಆರ್​ಎಲ್ ಹೆಸರಲ್ಲಿ ವಂಚಿಸುತ್ತಿದ್ದವರ ಸೆರೆ: ನಕಲಿ ವೆಬ್​ಸೈಟ್ ತೆರೆದು ಕೊರಿಯರ್ ಪಡೆಯುತ್ತಿದ್ದ ಖದೀಮರು

ಬೆಂಗಳೂರು: ಗೂಗಲ್​ನಲ್ಲಿ ವಿಆರ್​ಎಲ್ ಲಾಜಿಸ್ಟಿಕ್ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ಜನರಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ಹೈದರಾಬಾದ್​ನಗರ ನಿವಾಸಿ ರಾಜುರಾಮ್ ಶಿರವಿ (35) ಮತ್ತು ರಾಜಸ್ಥಾನ ಮೂಲದ ಗೊರಗುಂಟೆಪಾಳ್ಯ ನಿವಾಸಿ ದಿನೇಶ್​ಕುಮಾರ್ (23) ಬಂಧಿತರು. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.

ಹೆಸರಾಂತ ಕೊರಿಯರ್ ಸಂಸ್ಥೆಯಾದ ವಿಆರ್​ಎಲ್ ಲಾಜಿಸ್ಟ್ರಿಕ್ಸ್ ಕಂಪನಿ ಹೆಸರಿನಲ್ಲಿ ಗೂಗಲ್​ನಲ್ಲಿ ನಕಲಿ ವೆಬ್​ಸೈಟ್ ತೆರೆದು ಕೋರಿಯರ್ ಸೇವೆ ಒದಗಿಸುವ ಕುರಿತು ಜಾಹೀರಾತು ನೀಡಿ, ವಂಚಕರು ಮೊಬೈಲ್ ನಂಬರ್ ಅಪ್​ಲೋಡ್ ಮಾಡುತ್ತಿದ್ದರು.

ಸಾರ್ವಜನಿಕರು ಕೊರಿಯರ್ ಸೇವೆಗಾಗಿ ವಿಆರ್​ಎಲ್ ಲಾಜಿಸ್ಟ್ರಿಕ್ಸ್ ಕಂಪನಿಯ ನೈಜ ವೆಬ್​ಸೈಟ್ ಎಂದು ತಪ್ಪಾಗಿ ತಿಳಿದು ನಕಲಿ ವೆಬ್​ಸೈಟ್ ತೆರೆದು ಅದರಲ್ಲಿನ ವಂಚಕರ ಮೊಬೈಲ್ ನಂಬರ್​ಗೆ ಕರೆ ಮಾಡುತ್ತಿದ್ದರು. ವಂಚಕರು ತಾವೇ ವಿಆರ್​ಎಲ್ ಲಾಜಿಸ್ಟ್ರಿಕ್ಸ್ ಕಂಪನಿ ಅಧಿಕಾರಿ, ಸಿಬ್ಬಂದಿ ಎಂದು ಸುಳ್ಳು ಹೇಳಿ ಮಾತನಾಡಿ ಕಡಿಮೆ ಬೆಲೆಗೆ ಸೇವೆ ಒದಗಿಸುವುದಾಗಿ ಭರವಸೆ ನೀಡುತ್ತಿದ್ದರು. ಆನಂತರ ಗ್ರಾಹಕರು ತಿಳಿಸಿದ ಸ್ಥಳಕ್ಕೆ ಹೋಗಿ ಪಾರ್ಸೆಲ್ ಪಡೆದು ನಿಗದಿತ ಸ್ಥಳಕ್ಕೆ ಸಾಗಿಸುವುದಾಗಿ ಹೇಳಿ ಶುಲ್ಕ ಪಡೆಯುತ್ತಿದ್ದರು. ಆನಂತರ ಪಾರ್ಸೆಲ್​ಗಳನ್ನು ತಮಗೆ ಪರಿಚಯ ಇರುವ ಗೋದಾಮಿಗೆ ಸಾಗಿಸಿ ಇರಿಸಿಕೊಳ್ಳುತ್ತಿದ್ದರು. ನಿಗದಿತ ಸ್ಥಳಕ್ಕೆ ಮತ್ತು ಸಮಯಕ್ಕೆ ಪಾರ್ಸೆಲ್ ಬಾರದೆ ಇದ್ದಾಗ ವಾರಸುದಾರರು, ಆರೋಪಿಗಳ ಮೊಬೈಲ್ ನಂಬರ್​ಗೆ ಕರೆ ಮಾಡುತ್ತಿದ್ದರು. ವಂಚಕರು, ಹೆಚ್ಚಿನ ಹಣಕ್ಕೆ ಬೇಡಿಕೆ ಒಡ್ಡುತ್ತಿದ್ದರು. ಕೇಳಿದಷ್ಟು ಹಣವನ್ನು ಗ್ರಾಹಕರು ನೀಡದೆ ಇದ್ದರೆ ನಿಗದಿತ ವಿಳಾಸಕ್ಕೆ ಪಾರ್ಸೆಲ್ ತಲುಪಿಸುತ್ತಿರಲಿಲ್ಲ. ವಂಚನೆ ಮಾಡುತ್ತಿದ್ದರು. ಹೆಚ್ಚಿನ ಹಣ ಕೈ ಸೇರಿದ ಮೇಲೆ ಆರೋಪಿಗಳು, ಗ್ರಾಹಕರ ಸೋಗಿನಲ್ಲಿ ಹೋಗಿ ಅಧಿಕೃತ ಕೋರಿಯರ್ ಸಂಸ್ಥೆಯಲ್ಲಿ ಹೊಸದಾಗಿ ಪಾರ್ಸೆಲ್ ಬುಕ್ ಮಾಡಿ ಗ್ರಾಹಕರ ವಿಳಾಸಕ್ಕೆ ಪಾರ್ಸೆಲ್ ಕಳುಹಿಸುತ್ತಿದ್ದರು.

ಕೋರಿಯರ್ ಸಂಸ್ಥೆ ಸಿಬ್ಬಂದಿ ಪಾರ್ಸೆಲ್ ಡೆಲಿವರಿ ನೀಡಿ, ಗ್ರಾಹಕರಿಂದ ಹಣ ಪಡೆಯುತ್ತಿದ್ದರು. ಇದು ಗ್ರಾಹಕರಿಗೆ ಮತ್ತು ವಿಆರ್​ಎಲ್ ಲಾಜಿಸ್ಟ್ರಿಕ್ಸ್ ಕಂಪನಿಗೆ ನಷ್ಟ ಆಗುತ್ತಿತ್ತು. ಇದೇ ರೀತಿ ವಿಆರ್​ಎಲ್ ಲಾಜಿಸ್ಟ್ರಿಕ್ಸ್ ಕಂಪನಿ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರ್. ಇನ್​ಸ್ಪೆಕ್ಟರ್ ಸಂತೋಷ್ ರಾಮ್ ಮತ್ತು ಪಿಎಸ್​ಐ ರಘು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿ ಬರಬೇಕಾಗಿದೆ ಎಂದು ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.

ಗೋರಗುಂಟೆಪಾಳ್ಯದಲ್ಲಿ ಗೋದಾಮು: ಬಂಧಿತ ದಿನೇಶ್ ಮತ್ತು ರಾಜರಾಮ್ ಗ್ರಾಹಕರಿಂದ ಪಾರ್ಸೆಲ್ ಪಡೆದು ಗೋರಗುಂಟೆಪಾಳ್ಯದ ತಮಗೆ ಪರಿಚಯ ಇರುವ ನಾರ್ಸಿಂಗ್ ಎಂಬಾತನ ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದರು. ಆನಂತರ ಗ್ರಾಹಕರಿಗೆ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಒಡ್ಡುತ್ತಿದ್ದರು. ಹಣ ನೀಡದೆ ಇದ್ದರೆ ವಂಚನೆ ಮಾಡುತ್ತಿದ್ದರು.

ಒಂದೆಡೆಯಿಂದ ಮತ್ತೊಂದೆಡೆಗೆ ಪಾರ್ಸೆಲ್ ಕಳುಹಿಸುವಾಗ ಅಧಿಕೃತ ಕಂಪನಿಗಳ ವೆಬ್​ಸೈಟ್​ಗೆ ಭೇಟಿ ಕೊಟ್ಟು ಸೇವೆ ಪಡೆಯಿರಿ. ಅನುಮಾನ ಬಂದರೆ ಸಂಬಂಧಪಟ್ಟವರಿಗೆ ದೂರು ನೀಡಿ. | ಡಾ. ಅನೂಪ್ ಎ. ಶೆಟ್ಟಿ ಈಶಾನ್ಯ ವಿಭಾಗ ಡಿಸಿಪಿ
ನಕಲಿ ವೆಬ್​ಸೈಟ್​ಗಳು

● www.Vrlmoversandpackersindia.com
● www.Vrlmoverpacker.com
● www.Vrlpackersmoversbangalore.com
● www.Vrlmoversandpacker.in
● www.Vrlmoversandpackersbangalore.com
● www.Vrlpackersindia.in
● www.Vrlmovers.com
● www.Vrlhomerelocation.com
● www.Vrlpackermover.com
● www.Vrlmovers.in

ಈ ಹಿಂದೆಯೂ ಹಲವರ ಸೆರೆ: ಈ ಹಿಂದೆಯೂ ವಿಆರ್​ಎಲ್ ಲಾಜಿಸ್ಟಿಕ್ ಪ್ರೖೆ.ಲಿ. ಹೆಸರು ದುರ್ಬಳಕ್ಕೆ ಮಾಡಿಕೊಂಡು ಗ್ರಾಹಕರಿಗೆ ವಂಚಿಸಿದ್ದ ಆರೋಪಿಗಳು ಸೆರೆ ಸಿಕ್ಕಿದ್ದರು. ವೈಟ್​ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು, ಮಾದನಾಯಕನಹಳ್ಳಿ ಮಾಕಳಿ ಗ್ರಾಮದ ಶಿವಕುಮಾರ್, ಸಂದೀಪ್ ಹಾಗೂ ಪ್ರದೀಪ್ ಎಂಬುವರನ್ನು ಬಂಧಿಸಿದ್ದರು. ಕೊಡಿಗೇಹಳ್ಳಿ ಪೊಲೀಸರು, ದೀಪಕ್ ಕೌಶೀಕ್ ಎಂಬಾತನನ್ನು ಬಂಧಿಸಿದ್ದರು. ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು, ರಾಜಸ್ಥಾನ ಮೂಲದ ಪೂರನ್ ಸಿಂಗ್ ಚೌವ್ಹಾಣ್, ನರೇಂದ್ರ, ಧಮೇಂದರ್ ಮತ್ತು ಹರಿಯಾಣ ಮೂಲದ ಧರ್ಮವೀರ್ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.