ನ್ಯೂಸ್

ಕೇಂದ್ರ ಸಚಿವರು ಕಚೇರಿಗೆ ಬಂದರೂ ಬರುತ್ತಿಲ್ಲ ಅಧಿಕಾರಿಗಳು, ಇದಕ್ಕೆ ಅಧಿಕಾರಿಗಳು ಕೊಡುವ ಕಾರಣವೇ ಬೇರೆ...

ನವದೆಹಲಿ: ಕರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವರು ಕಚೇರಿಗಳಿಗೆ ಬರಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮತ್ತು ಅಗತ್ಯ ಸಿಬ್ಬಂದಿ ಸೋಮವಾರದಿಂದಲೇ ಕಚೇರಿಗೆ ಬರಬೇಕು ಎಂದು ಎಲ್ಲ ಸಚಿವಾಲಯಗಳು ಸಿಬ್ಬಂದಿಗೆ ಸೂಚಿಸಿವೆ. ಆದರೂ, ಕೇಂದ್ರ ಸಚಿವರು ಕಚೇರಿಗೆ ಬಂದರೂ ಅಧಿಕಾರಿಗಳು ಕಚೇರಿಗೆ ಬರಲು ನಿರಾಕರಿಸುತ್ತಿದ್ದಾರೆ.

ಕರೊನಾ ವಿರುದ್ಧದ ಹೋರಾಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇರುವ ಜನರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ, ಈ ಇಲಾಖೆಯ ಸಚಿವರಾದ ರಾಮ ವಿಲಾಸ್​ ಪಾಸ್ವಾನ್​ ಜವಾಬ್ದಾರಿಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಚೇರಿಗೆ ಬರಲು ಆರಂಭಿಸಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಬರಲೊಪ್ಪುತ್ತಿಲ್ಲ.

ಎಚ್ಚರಿಕೆ ನೋಟಿಸ್​: ಕಚೇರಿಗೆ ಬರಲು ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದನ್ನು ಆಹಾರ ಸಚಿವ ರಾಮ ವಿಲಾಸ್​ ಪಾಸ್ವಾನ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಕಚೇರಿಗೆ ಬರಲು ಇಷ್ಟವಿಲ್ಲವಾದರೆ, ಏಪ್ರಿಲ್​ 20ರೊಳಗೆ ತಿಳಿಸಿ. ಅಂಥ ಅಧಿಕಾರಿಗಳನ್ನು ಬೇರೊಂದು ಇಲಾಖೆಗೆ ಕಳುಹಿಸಲಾಗುವುದು ಎಂಬರ್ಥದ ನೋಟಿಸ್​ ಜಾರಿ ಮಾಡಿದ್ದಾರೆ.

ಅಧಿಕಾರಿಗಳ ವಾದ ಇದು: ಲಾಕ್​ಡೌನ್​ ಘೋಷಿಸುವ ಸಂದರ್ಭದಲ್ಲಿ ಕಚೇರಿಗಳನ್ನು ಕೂಡ ಮುಚ್ಚಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲಿಖಿತವಾಗಿ ಮಾಹಿತಿ ಕೊಟ್ಟಿತ್ತು. ಆದರೆ, ಕಚೇರಿಗಳ ಮರುಆರಂಭದ ಬಗ್ಗೆ ಲಿಖಿತ ಮಾಹಿತಿ ನೀಡದೆ, ಕೇವಲ ಮೊಬೈಲ್​ಫೋನ್​ಗಳ ಮೂಲಕ ಸೂಚನೆ ಕೊಡಲಾಗಿದೆ. ಹಾಗಾಗಿ ನಾವು ಕಚೇರಿಗೆ ಹಾಜರಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.