ನ್ಯೂಸ್

ಇಡೀ ದೇಹದ ರಕ್ತಸಂಚಾರ ಉತ್ತಮಗೊಳಿಸುವ ಯೋಗಾಸನವಿದು! ಕಾಲಿಗೆ, ಬೆನ್ನಿಗೆ ವಿಶೇಷ ವ್ಯಾಯಾಮ ನೀಡುತ್ತೆ!

ಕಾಲುಗಳಿಗೆ, ಬೆನ್ನಿಗೆ ವಿಶೇಷವಾದ ವ್ಯಾಯಾಮ ದೊರಕುವ ಯೋಗಾಸನವೆಂದರೆ 'ಊರ್ಧ್ವಮುಖ ಪಶ್ಚಿಮೋತ್ಥಾಸನ'. ಕಾಲುಗಳನ್ನು ತೀವ್ರವಾಗಿ ಎಳೆತಕ್ಕೆ ಒಳಪಡಿಸಿ ಮೇಲ್ಮುಖವಾಗಿ ತರುವ ಆಸನವಿದು. ಇದರ ಅಭ್ಯಾಸದ ವೇಳೆ ಶಿರಸ್ಸಿನಿಂದ ಕಾಲಿನ ತುದಿಯವರೆಗೆ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ.

ಪ್ರಯೋಜನಗಳು: ಊರ್ಧ್ವಮುಖ ಪಶ್ಚಿಮೋತ್ಥಾಸನ ಮಾಡುವುದರಿಂದ, ವಿಶೇಷವಾಗಿ, ಸಮತೋಲನವನ್ನು ಕಾಪಾಡಬಹುದು. ಜೀರ್ಣಾಂಗದ ವ್ಯವಸ್ಥೆ ಸುಧಾರಿಸುತ್ತದೆ. ಬೊಜ್ಜು ಕರಗಲು ಉಪಯುಕ್ತ. ಒತ್ತಡ ನಿಯಂತ್ರಣವಾಗಿ ಮನಸ್ಸು ಹಗುರವಾಗುತ್ತದೆ.

ಮಾಡುವ ವಿಧಾನ: ಪ್ರಥಮವಾಗಿ ದಂಡಾಸನದಲ್ಲಿ ಕಾಲು ಚಾಚಿ ಕುಳಿತುಕೊಳ್ಳಬೇಕು. ಎರಡೂ ಕೈಗಳ ಸಹಾಯದಿಂದ ನಿಧಾನವಾಗಿ ಉಸಿರನ್ನು ಬಿಡುತ್ತಾ ಕಾಲುಗಳನ್ನು ಮೇಲಕ್ಕೆತ್ತಬೇಕು. ಮೊಣಕಾಲುಗಳನ್ನು ಮತ್ತು ಬೆನ್ನನ್ನು ನೇರವಾಗಿಸಿ, ಮುಖವನ್ನು ಮಂಡಿಗೆ ಸ್ಪರ್ಶಿಸಲು ಪ್ರಯತ್ನಿಸಬೇಕು. ಈ ಸ್ಥಿತಿಯಲ್ಲಿ ಪೃಷ್ಠದ ಆಧಾರದಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಹಾಯಾಗಿರಬೇಕು. ಆಮೇಲೆ ಉಸಿರನ್ನು ಬಿಡುತ್ತಾ ಕಾಲುಗಳನ್ನು ಕೆಳಗಿಳಿಸಬೇಕು. ಕೈಗಳನ್ನು ಹಿಂದಕ್ಕೆ ಊರಿ ಕಾಲುಗಳನ್ನು ಅಲ್ಲಾಡಿಸುತ್ತಾ ವಿಶ್ರಮಿಸಬೇಕು.

ಸ್ವಲ್ಪ ಕ್ಲಿಷ್ಟಕರವಾದ ಭಂಗಿ ಇರುವುದರಿಂದ ಈ ಆಸನವನ್ನು ಗುರುಮುಖೇನ ಮಾರ್ಗದರ್ಶನದೊಂದಿಗೆ ಕಲಿಯುವುದು ಒಳ್ಳೆಯದು. ಒಮ್ಮೆ ಅಭ್ಯಾಸವಾದ ಮೇಲೆ ಎರಡು ಬಾರಿ ಮೂರು ಬಾರಿ ಮಾಡಬೇಕು. ಕಾಲು ನೋವು ಅಥವಾ ಬೆನ್ನಿನ ಗಾಯವಿದ್ದವರು ಊರ್ಧ್ವಮುಖ ಪಶ್ಚಿಮೋತ್ಥಾಸನವನ್ನು ಮಾಡಬಾರದು.