ನ್ಯೂಸ್

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ಈ ವರ್ಷ ಇಲ್ಲ

ನವದೆಹಲಿ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಮೌಲ್ಯ ಕುಸಿತ ಹಾಗೂ ವಸೂಲಾಗದ ಸಾಲದ ಹೊರೆ ಹೆಚ್ಚಾಗುತ್ತಿರುವುದರಿಂದ ಪ್ರಸಕ್ತ ವಿತ್ತ ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು (ಪಿಎಸ್​ಬಿ) ಖಾಸಗೀಕರಿಣ ಮಾಡುವ ಸಂಭವವಿಲ್ಲ.

ಸದ್ಯಕ್ಕೆ ನಾಲ್ಕು ಪಿಎಸ್​ಬಿಗಳು ರಿಸರ್ವ್ ಬ್ಯಾಂಕ್​ನ ಸರಿಪಡಿಸುವ ಕ್ರಿಯೆಯ (ಪಿಸಿಎ) ಸಕ್ರಿಯ ಪರಿಶೀಲನೆಯಲ್ಲಿದೆ. ಈ ನಾಲ್ಕು ಬ್ಯಾಂಕ್​ಗಳ ಮೇಲೆ ಹಲವು ನಿರ್ಬಂಧಗಳನ್ನು ಆರ್​ಬಿಐ ವಿಧಿಸಿದೆ. ಸಾಲ ನೀಡಿಕೆ, ಆಡಳಿತ ಪರಿಹಾರ ಮತ್ತು ನಿರ್ದೇಶಕರ ಶುಲ್ಕ ಈ ನಿರ್ಬಂಧಗಳಲ್ಲಿ ಸೇರಿವೆ. ಆದ್ದರಿಂದ ಪ್ರಸ್ತಾಪಿತ ನಾಲ್ಕು ಬ್ಯಾಂಕ್​ಗಳನ್ನು ಮಾರಾಟ ಮಾಡುವಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಆರ್​ಬಿಐ ಅಭಿಮತವಾಗಿದೆ.

ಇಂಡಿಯನ್ ಓವರ್​ಸೀಸ್ ಬ್ಯಾಂಕ್ (ಐಓಬಿ), ಭಾರತೀಯ ಸೆಂಟ್ರಲ್ ಬ್ಯಾಂಕ್ (ಸಿಬಿಐ), ಯುಕೋ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಆರ್​ಬಿಐನ ಹದ್ದಿನ ಕಣ್ಣಿನಲ್ಲಿರುವ ಸಾರ್ವಜನಿಕ ರಂಗದ ಬ್ಯಾಂಕ್​ಗಳಾಗಿವೆ. ವಿಶೇಷವಾಗಿ ಮಹತ್ವದ ವಲಯದಲ್ಲಿರುವ ತನ್ನ ಸಂಸ್ಥೆಗಳನ್ನು ಹತಾಶೆಯಿಂದ ಮಾರುವುದರಿಂದ ಸರ್ಕಾರ ದೂರವುಳಿಯಲಿದೆ ಎಂದು ಮೂಲಗಳು ಹೇಳಿವೆ.

ಕೋವಿಡ್-19 ಸಾಂಕ್ರಾಮಿಕತೆಯಿಂದಾಗಿ ಪಿಎಸ್​ಬಿಗಳನ್ನು ಸುಧಾರಿಸುವ ಕಾರ್ಯವೇ ಸ್ಥಗಿತಗೊಂಡಿದೆ. ಅಷ್ಟು ಮಾತ್ರವಲ್ಲದೆ ಖಾಸಗಿ ವಲಯದ ಬ್ಯಾಂಕ್​ಗಳ ಆರ್ಥಿಕ ಪರಿಸ್ಥಿತಿ ಮೇಲೆ ಕರೊನಾ ವ್ಯಾಧಿ ಸನ್ನಿವೇಶ ಪ್ರತಿಕೂಲ ಪರಿಣಾಮ ಬೀರುತ್ತಿದೆಯೆನ್ನುವುದು ಗಮನಾರ್ಹ ಸಂಗತಿಯಾಗಿದೆ.